ಇಸ್ರೇಲ್ ಪ್ರಧಾನಿ ತಮ್ಮ ನಿಲುವು ಬದಲಿಸಬೇಕು: ಮೊದಲ ಬಾರಿ ನೆತನ್ಯಾಹುವಿಗೆ ಬಹಿರಂಗ ಎಚ್ಚರಿಕೆ ನೀಡಿದ ಬೈಡನ್
ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ನಿಲುವು ಬದಲಿಸಬೇಕು ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಅನಿಯಂತ್ರಿತ ಬಾಂಬ್ ದಾಳಿಯಿಂದಾಗಿ ಇಸ್ರೇಲ್ ಏಕಾಂಗಿಯಾಗಿ ನಿಲ್ಲಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಹಮಾಸ್ ವಿರುದ್ಧ ಇಸ್ರೇಲ್ ಸಂಘರ್ಷ ಆರಂಭವಾದ ನಂತರ ಇಸ್ರೇಲ್ ವಿರುದ್ಧ ಇದೇ ಮೊದಲ ಬಾರಿ ತೀಕ್ಷ್ಣವಾಗಿ ಸ್ಪಂದಿಸಿರುವ ಬೈಡನ್, “ಇಸ್ರೇಲ್… ಬೆಂಬಲ ಕಳೆದುಕೊಳ್ಳಲು ಆರಂಭಿಸಿದೆ,” ಎಂದು ಹೇಳಿದ್ದಾರೆ.
ರಾಜಕೀಯ ನಿಧಿ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ದಾನಿಗಳನ್ನುದ್ದೇಶಿಸಿ ಬೈಡನ್ ಮಾತನಾಡುತ್ತಿದ್ದರು.
ನೆತನ್ಯಾಹು ಅವರ ನೇತೃತ್ವದ ಮೈತ್ರಿ ಸರ್ಕಾರವು ಇಸ್ರೇಲ್ ಇತಿಹಾಸದಲ್ಲಿಯೇ ಅತ್ಯಂತ ಸಂಕುಚಿತ ಮನೋಭಾವದ ಸರ್ಕಾರವಾಗಿದೆ… ಅದಕ್ಕೆ ಎರಡು-ದೇಶದ ಪರಿಹಾರ ಬೇಕಿಲ್ಲ,” ಎಂದು ಬೈಡನ್ ಹೇಳಿದರು.
“ನನಗನಿಸುತ್ತದೆ, ಅವರು ಬದಲಾಗಬೇಕು, ಮತ್ತು ಇಸ್ರೇಲ್ನಲ್ಲಿರುವ ಈ ಸರ್ಕಾರದಲ್ಲಿ ಅವರಿಗೆ ಯಾವುದೇ ಕ್ರಮಕ್ಕೆ ಮುಂದಾಗುವುದು ಕಷ್ಟವಾಗುತ್ತಿದೆ,” ಎಂದು ಬೈಡನ್ ಹೇಳಿದರು.
ಖಾಸಗಿಯಾಗಿ ಅಮೆರಿಕಾದ ಅಧಿಕಾರಿಗಳು ಇಸ್ರೇಲ್ಗೆ ತನ್ನ ನಿಲುವು ಬದಲಾಯಿಸಲು ಒತ್ತಾಯಿಸುತ್ತಿದ್ದರೂ ಬೈಡನ್ ಅವರು ಇದೇ ಮೊದಲ ಬಾರಿ ನೆತನ್ಯಾಹು ಅವರ ಮೇಲೆ ಬಹಿರಂಗ ಒತ್ತಡ ಹೇರಿದ್ದಾರೆ.