ಗಾಝಾ: ವಿಶ್ವಸಂಸ್ಥೆ ಶಾಲೆಯ ಮೇಲೆ ಇಸ್ರೇಲ್ ದಾಳಿ; 15 ಮಂದಿ ಮೃತ್ಯು

Update: 2023-11-04 18:28 GMT

ಫೈಲ್ ಫೋಟೊ - PTI

ಗಾಝಾ: ಉತ್ತರ ಗಾಝಾದ ಜಬಾಲ ನಿರಾಶ್ರಿತರ ಶಿಬಿರದಲ್ಲಿ ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಿದ್ದ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 15 ಮಂದಿ ಮೃತಪಟ್ಟಿದ್ದು 54 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ಉತ್ತರ ಗಾಝಾ ಪಟ್ಟಿಯ ಜಬಾಲದಲ್ಲಿ ಸಾವಿರಾರು ನಿರಾಶ್ರಿತರು ಆಶ್ರಯ ಪಡೆದಿದ್ದ ಅಲ್-ಫಕೂರಾ ಶಾಲೆಯ ಮೇಲೆ ದಾಳಿ ನಡೆದಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅಲ್-ಶಿಫಾ ಆಸ್ಪತ್ರೆಯ ಮೂಲಗಳು ಹೇಳಿವೆ. ಗಾಝಾ ಪಟ್ಟಿಯಲ್ಲಿ ಯುದ್ಧದಿಂದ ನಿರಾಶ್ರಿತಗೊಂಡವರು ಆಶ್ರಯ ಪಡೆದಿದ್ದ ತನ್ನ 4 ಶಾಲೆಗಳು ಬಾಂಬ್ದಾಳಿಯಲ್ಲಿ ಹಾನಿಗೊಳಗಾಗಿವೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ.

ಇಸ್ರೇಲ್ ಮುತ್ತಿಗೆ ಹಾಕಿರುವ ಉತ್ತರ ಗಾಝಾದಿಂದ ಗಾಯಾಳುಗಳನ್ನು ಸ್ಥಳಾಂತರಿಸಲು ಬಳಸುತ್ತಿದ್ದ ಆಂಬ್ಯುಲೆನ್ಸ್ ಅನ್ನು ಗುರಿಯಾಗಿಸಿ ಶುಕ್ರವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಜನರು ಮೃತಪಟ್ಟು ಇತರ 60 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ. ಆದರೆ ಹಮಾಸ್ ಪಡೆ ಈ ಆಂಬ್ಯುಲೆನ್ಸ್ ಬಳಸುತ್ತಿರುವ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ್ದು ಮೃತರು ಹಮಾಸ್ ಹೋರಾಟಗಾರರು ಎಂದು ಇಸ್ರೇಲ್ ಸೇನೆ ಪ್ರತಿಪಾದಿಸಿದೆ. ದಕ್ಷಿಣ ಗಾಝಾಕ್ಕೆ ಸ್ಥಳಾಂತರಗೊಳ್ಳಲು ಅಲ್ಲಿನ ನಿವಾಸಿಗಳಿಗೆ ಸಾಕಷ್ಟು ಅವಕಾಶ ನೀಡಿದ್ದೆವು. ಗಡುವು ಮುಗಿದ ಬಳಿಕ ಆ ಪ್ರದೇಶವನ್ನು ಯುದ್ಧಭೂಮಿ ಎಂದು ಪರಿಗಣಿಸುವುದಾಗಿಯೂ ಎಚ್ಚರಿಸಿದ್ದೆವು’ ಎಂದು ಇಸ್ರೇಲ್ ಸೇನೆ ಹೇಳಿದೆ.

ರೋಗಿಗಳನ್ನು ಸಾಗಿಸುತ್ತಿರುವ ಆಂಬ್ಯುಲೆನ್ಸ್ಗಳ ಮೇಲೆ ದಾಳಿ ನಡೆದಿರುವ ಮಾಹಿತಿಯಿಂದ ತೀವ್ರ ಆಘಾತವಾಗಿದೆ. ರೋಗಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ರಕ್ಷಿಸುವುದು ಎಲ್ಲರ ಬಾಧ್ಯತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.

ಶುಕ್ರವಾರ ಗಾಝಾದಲ್ಲಿ ಅಲ್-ಶಿಫಾ ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್ ಬೆಂಗಾವಲ ವಾಹನದ ಮೇಲೆ ವರದಿಯಾದ ದಾಳಿಯಿಂದ ಗಾಭರಿಗೊಂಡಿದ್ದೇನೆ. ಆಸ್ಪತ್ರೆಯ ಹೊರಗೆ ಬೀದಿಯಲ್ಲಿ ಹರಡಿರುವ ಮೃತದೇಹಗಳ ಫೋಟೋಗಳನ್ನು ನೋಡಿದರೆ ಯಾತನೆಯಾಗುತ್ತದೆ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News