ಬೈಡನ್ ಭೇಟಿಯ ಬಳಿಕ ಗಾಝಾ ಆಕ್ರಮಣಕ್ಕೆ ಇಸ್ರೇಲ್ ಯೋಜನೆ: ವರದಿ
ಟೆಲ್ ಅವೀವ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಗೆ ಭೇಟಿ ನೀಡಿದ ಬಳಿಕ ಗಾಝಾದ ಮೇಲೆ ಆಕ್ರಮಣ ನಡೆಸಲು ಇಸ್ರೇಲ್ ಯೋಜನೆ ರೂಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಾಝಾದ ಮೇಲೆ ಭೂಸೇನೆಯ ಆಕ್ರಮಣವನ್ನು ಅಜ್ಞಾತ ದಿನಾಂಕದವರೆಗೆ ಮುಂದೂಡಲಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಅನ್ನು ತೊರೆದ ತಕ್ಷಣ ಆರಂಭಗೊಳ್ಳಬಹುದು ಎಂದು ಇಸ್ರೇಲ್ ನ ಮೂಲಗಳನ್ನು ಉಲ್ಲೇಖಿಸಿ ಟೆಲಿಗ್ರಾಫ್ ವರದಿ ಮಾಡಿದೆ.
ಆದರೆ ಈ ವಿಳಂಬವು ಇಸ್ರೇಲ್ ನ ಕೆಲವು ಮಿಲಿಟರಿ ಕಮಾಂಡರ್ ಗಳಲ್ಲಿ ಹತಾಶೆಗೆ ಕಾರಣವಾಗಿದೆ. ವಿಳಂಬವಾದಷ್ಟೂ ಹಮಾಸ್ ಗೆ ಸಿದ್ಧತೆ ನಡೆಸಲು ಹೆಚ್ಚಿನ ಅವಕಾಶ ದೊರೆತಂತಾಗುತ್ತದೆ ಎಂದು ಹಲವು ಯೋಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೈಡನ್ ಬುಧವಾರ ಇಸ್ರೇಲ್ ಗೆ ಭೇಟಿ ನೀಡುತ್ತಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ಮಂಗಳವಾರದ ಕೆಲವು ಬೆಳವಣಿಗೆಗಳು:
* ಗಾಝಾದಿಂದ ನಮ್ಮ ಪ್ರಜೆಗಳನ್ನು ಮರಳಿ ತರಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಇಸ್ರೇಲ್ ನ ಗುಪ್ತಚರ ಸಚಿವೆ ಗಿಲಾ ಗ್ಯಾಮ್ಲಿಯೆಲ್ ಹೇಳಿದ್ದಾರೆ.
* ಗಾಝಾ ಪಟ್ಟಿಯಲ್ಲಿ ಪರಿಸ್ಥಿತಿ ಸುಧಾರಿಸಿದರೆ ನಮ್ಮ ಬಳಿ ಇರುವ ‘ವಿದೇಶಿ ಅತಿಥಿ’ಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಹಮಾಸ್ ಘೋಷಿಸಿದೆ.
* ಕೇಂದ್ರ ಗಾಝಾದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ ಹಮಾಸ್ ನ ಉನ್ನತ ಕಮಾಂಡರ್ ಮೃತಪಟ್ಟಿರುವುದಾಗಿ ಹಮಾಸ್ ನ ಮಿಲಿಟರಿ ಘಟಕ ಹೇಳಿದೆ.
* ಸಂಘರ್ಷದಲ್ಲಿ 3000 ಫೆಲೆಸ್ತೀನೀಯರು ಮೃತಪಟ್ಟು 12,500 ಮಂದಿ ಗಾಯಗೊಂಡಿದ್ದಾರೆ. ಜತೆಗೆ 1,200 ಜನರು ಕುಸಿದು ಬಿದ್ದ ಕಟ್ಟಡಗಳಡಿ ಜೀವಂತ ಸಮಾಧಿಯಾಗಿರುವ ಸಾಧ್ಯತೆಯಿದೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
* ಇಸ್ರೇಲ್ ನಲ್ಲಿ 1,400ಕ್ಕೂ ಅಧಿಕ ಜನರು ಮೃತಪಟ್ಟಿದ್ದು ಕನಿಷ್ಟ 199 ಮಂದಿಯನ್ನು ಹಮಾಸ್ ಸೆರೆಹಿಡಿದು ಗಾಝಾಕ್ಕೆ ಕರೆದೊಯ್ದಿದೆ ಎಂದು ಇಸ್ರೇಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಇಸ್ರೇಲ್-ಹಮಾಸ್ ಮಧ್ಯೆ ಗಾಝಾದಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 2000 ಯೋಧರ ತುಕಡಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅಮೆರಿಕದ ಮಿಲಿಟರಿ ಹೇಳಿದೆ.
* ಲೆಬನಾನ್ ಗಡಿಭಾಗದಲ್ಲಿ ಇಸ್ರೇಲ್ ನ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
* ಇಸ್ರೇಲ್ ತನ್ನ ಯುದ್ಧಕಾಲದ ಸಂವಹನಗಳನ್ನು ಹೆಚ್ಚಿಸಲು ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆಗಳನ್ನು ಸ್ಥಾಪಿಸುವ ಕುರಿತು ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಜತೆ ಮಾತುಕತೆ ನಡೆಸುತ್ತಿದೆ ಎಂದು ಇಸ್ರೇಲ್ ಮೂಲಗಳು ಹೇಳಿವೆ.