ಕೆನ್ಯಾ: ಅಣೆಕಟ್ಟು ಒಡೆದು 42 ಮಂದಿ ಸಾವು
ನೈರೋಬಿ : ಕೆನ್ಯಾದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹದ ಸಮಸ್ಯೆ ಉಂಟಾಗಿದ್ದು ರಿಫ್ಟ್ ವ್ಯಾಲಿಯ ನಗರದ ಬಳಿ ಅಣೆಕಟ್ಟೆ ಒಡೆದು ಕನಿಷ್ಠ 42 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ನಕುರು ನಗರದ ಮಯಿ ಮಹಿಯು ಪ್ರದೇಶದಲ್ಲಿ ಅಣೆಕಟ್ಟು ಒಡೆದಿದ್ದು ಹಲವು ಮನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. `ಪ್ರಾಥಮಿಕ ಮಾಹಿತಿಯಂತೆ 42 ಮಂದಿ ಮೃತಪಟ್ಟಿದ್ದಾರೆ. ಕೆಸರು, ಮಣ್ಣಿನಡಿ ಇನ್ನೂ ಹಲವರು ಸಿಲುಕಿರುವ ಶಂಕೆಯಿದ್ದು ಸಾವು-ನೋವಿನ ಪ್ರಮಾಣ ಹೆಚ್ಚಾಗಬಹುದು' ಎಂದು ಗವರ್ನರ್ ಸುಸಾನ್ ಕಿಹಿಕಾ ಹೇಳಿದ್ದಾರೆ. ಈ ಮಧ್ಯೆ, ಪೂರ್ವ ಕೆನ್ಯಾದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತಾನಾ ನದಿಯಲ್ಲಿ ಸಾಮಥ್ರ್ಯಕ್ಕಿಂತ ಅಧಿಕ ಜನರು ಪ್ರಯಾಣಿಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ್ದು 23 ಮಂದಿಯನ್ನು ರಕ್ಷಿಸಲಾಗಿದೆ. 2 ಮೃತದೇಹಗಳು ಪತ್ತೆಯಾಗಿದ್ದು ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಕೆನ್ಯಾ ರೆಡ್‍ಕ್ರಾಸ್ ಸೋಮವಾರ ಹೇಳಿದೆ. ಕೆನ್ಯಾದಲ್ಲಿ ಮಾರ್ಚ್‍ನಿಂದ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ಹಲವೆಡೆ ನೆರೆನೀರು ತುಂಬಿದ್ದು 1,30,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಬೇಸಿಗೆ ರಜೆಗಾಗಿ ಮುಚ್ಚಲಾಗಿರುವ ಶಾಲೆಗಳನ್ನು ನಿಗದಿತ ಅವಧಿಗಿಂತ ಒಂದು ವಾರ ಕಳೆದು ಪುನರಾರಂಭಿಸುವುದಾಗಿ ಶಿಕ್ಷಣ ಇಲಾಖೆ ಘೋಷಿಸಿದೆ.