ಸ್ವೀಡನ್‌ನಲ್ಲಿ ಸ್ವೀಡಿಷ್ ಅನುವಾದದ 1 ಲಕ್ಷ ಕುರ್‌ಆನ್ ಪ್ರತಿಯನ್ನು ವಿತರಿಸಲು ಕುವೈತ್ ಸರ್ಕಾರ ನಿರ್ಧಾರ
ಕುವೈತ್: ಕುವೈತ್ ಸರ್ಕಾರವು ಸ್ವೀಡಿಷ್ ಭಾಷೆಗೆ ಭಾಷಾಂತರಿಸಿದ ಪವಿತ್ರ ಕುರ್‌ಆನ್‌ನ 1,00,000 ಪ್ರತಿಗಳನ್ನು ಮುದ್ರಿಸುವ ಯೋಜನೆಯನ್ನು ಪ್ರಕಟಿಸಿದೆ ಎಂದು kuwaittimes.com ವರದಿ ಮಾಡಿದೆ.
ಕಳೆದ ತಿಂಗಳು ಈದುಲ್ ಅಝ್ ಹಾ ಸಂದರ್ಭದಲ್ಲಿ ಸ್ವೀಡನ್‌ನಲ್ಲಿ ವ್ಯಕ್ತಿಯೊಬ್ಬ ಕುರ್‌ಆನ್ ಅನ್ನು ಸುಟ್ಟುಹಾಕಿದ್ದ. ಕುರ್‌ಆನ್ ಗೆ ಬೆಂಕಿ ಹಾಕಿದ ಪ್ರಕರಣವು ವಿಶ್ವದಾದ್ಯಂತ ಮುಸ್ಲಿಮರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಕುವೈತ್ ಸರ್ಕಾರವು ಈ ಯೋಜನೆಗೆ ಮುಂದಾಗಿದೆ.
ಕುವೈತ್ ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಸ್ವೀಡನ್‌ನಲ್ಲಿ ಈ ಪ್ರತಿಗಳನ್ನು ವಿತರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
"ಎಲ್ಲಾ ಮಾನವರಲ್ಲಿ ಇಸ್ಲಾಮಿಕ್ ಮೌಲ್ಯಗಳು ಮತ್ತು ಸಹಬಾಳ್ವೆಯನ್ನು ಹರಡಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಮುದ್ರಣ ಹಾಗೂ ವಿತರಣೆಯ ಹೊಣೆ ಹೊತ್ತ ಅಧಿಕೃತ ಸಂಸ್ಥೆ ಹೇಳಿದೆ.
ಸರ್ಕಾರದ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಸಂಸ್ಥೆಯು ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದೆ ಎಂದು ಕುವೈತ್‌ನಲ್ಲಿ ಕುರ್‌ಆನ್ ಮುದ್ರಿಸುವ ಮತ್ತು ಪ್ರಕಟಿಸುವ ಪ್ರಾಧಿಕಾರದ ಮುಖ್ಯಸ್ಥ ಫಹದ್ ಅಲ್-ದೈಹಾನಿ ಹೇಳಿದರು.
(ಈ ನಡೆಯು) ಇಸ್ಲಾಮಿಕ್ ನಂಬಿಕೆಯ ಸಹಿಷ್ಣುತೆಯನ್ನು ದೃಢೀಕರಿಸುವ ಗುರಿಯನ್ನು ಹೊಂದಿದೆ . ಇದು ಪ್ರೀತಿ, ಸಹಿಷ್ಣುತೆ, ಶಾಂತಿಯ ವಾತಾವರಣದಲ್ಲಿ, ಕರುಣೆಯನ್ನು ಎತ್ತಿ ತೋರಿಸುತ್ತದೆ ಮತ್ತು ದ್ವೇಷ, ಉಗ್ರವಾದ ಮತ್ತು ಧಾರ್ಮಿಕ ಮತಾಂಧತೆಯನ್ನು ತಿರಸ್ಕರಿಸುತ್ತದೆ" ಎಂದು ಅಲ್-ದೈಹಾನಿ ಹೇಳಿದ್ದಾರೆ.
ಪವಿತ್ರ ಕುರ್‌ಆನ್ ಜೊತೆಗೆ ಪ್ರವಾದಿ ಅವರ ಹದೀಸ್ (ಪ್ರವಾದಿ ಚರ್ಯೆಗಳು) ಮತ್ತು ಅವರ ವೈಜ್ಞಾನಿಕತೆಯ ಬಗ್ಗೆಯೂ ಮುದ್ರಿಸಿ, ವಿತರಿಸಲಾಗುವುದು ಎಂದು kuwaittimes.com ವರದಿ ಮಾಡಿದೆ.