ಲೆಬನಾನ್, ಗಾಝಾದಲ್ಲಿ ಇಸ್ರೇಲ್ ವಾಯುದಾಳಿಗೆ ಕನಿಷ್ಠ 37 ಮಂದಿ ಬಲಿ
ಬೈರೂತ್ : ಲೆಬನಾನ್ ಹಾಗೂ ಉತ್ತರ ಗಾಝಾಪ್ಟ್ಟಯಲ್ಲಿ ರವಿವಾರ ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 37 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.
ಉತ್ತರ ಬೈರೂತ್ ನ ಗ್ರಾಮವೊಂದರಲ್ಲಿ ಇಸ್ರೇಲ್ ನ ವಾಯುದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ ಮತ್ತು ಇತರ ಆರು ಮಂದಿ ಗಾಯಗೊಂಡಿದ್ದಾರೆ. ಹಿಜ್ಬುಲ್ಲಾ ಹೋರಾಟಗಾರರನ್ನು ಗುರಿಯಾಗಿಸಿ ತಾನು ಲೆಬನಾನ್ ನಲ್ಲಿ ದಾಳಿಗಳನ್ನು ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಆದರೆ ಉತ್ತರ ಲೆಬನಾನ್ ನಲ್ಲಿ ಹಿಜ್ಬುಲ್ಲಾ ಉಪಸ್ಥಿತಿ ಗಣನೀಯವಾಗಿ ಇಲ್ಲದಿದ್ದರೂ, ಅದು ದಾಳಿ ನಡೆಸಿದೆಯೆಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಉತ್ತರ ಗಾಝಾದಲ್ಲಿ ಜಬಾಲಿಯಾದ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ಸೇನೆಯ ವಾಯುದಾಳಿಯಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಜಬಲಿಯಾದಲ್ಲಿ ಕಾರ್ಯಾಚರಿಸುತ್ತಿರುವ ಹಮಾಸ್ ಹೋರಾಟಗಾರರನ್ನು ಗುರಿಯಿರಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆಯಾದರೂ, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಅದು ಒದಗಿಸಿಲ್ಲ.
ಗಾಝಾ ನಗರದ ಮೇಲೆ ರವಿವಾರ ಇಸ್ರೇಲ್ ಎಸಗಿದ ಪ್ರತ್ಯೇಕ ದಾಳಿಯೊಂದರಲ್ಲಿ ಹಮಾಸ್ ಸರಕಾರದ ಸಚಿವ ವಾಯಿಲ್ ಅಲ್ ಖೋರ್ ಹಾಗೂ ಅವರ ಪತ್ನಿ ಮತ್ತು ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ನಾಗರಿಕ ರಕ್ಷಣಾ ಸಂಘಟನೆಯೊಂದು ತಿಳಿಸಿದೆ.