ಲಿಬಿಯ: ಭೀಕರ ಚಂಡಮಾರುತದಲ್ಲಿ ಮೃತರ ಸಾಮೂಹಿಕ ಸಮಾಧಿ

Update: 2023-09-16 18:04 GMT

Screen grabs from video tweeted by @LaswadSaid

ಟ್ರಿಪೋಲಿ : ಈ ವಾರದ ಆರಂಭದಲ್ಲಿ ಲಿಬಿಯಾಕ್ಕೆ ಅಪ್ಪಳಿಸಿದ್ದ ವಿನಾಶಕಾರಿ ಚಂಡಮಾರುತ ಹಾಗೂ ಪ್ರವಾಹದಿಂದ ಕಂಗೆಟ್ಟಿರುವ ಲಿಬಿಯಾದಲ್ಲಿ ಈಗ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಎಚ್ಚರಿಕೆ ನೀಡಿದೆ.

ಲಿಬಿಯಾದಲ್ಲಿ ವಲಸೆ ಕಾರ್ಯಾಚರಣೆಗಾಗಿ ಅಂತರಾಷ್ಟ್ರೀಯ ಸಂಸ್ಥೆಯ ಪ್ರಕಾರ ಚಂಡಮಾರುತ ಹಾಗೂ ಪ್ರವಾಹದಿಂದ 5000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಆಸ್ಪತ್ರೆಗಳಲ್ಲಿ 3,922 ಸಾವಿನ ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶದಿಂದ 38,640 ಜನರನ್ನು ಸ್ಥಳಾಂತರಿಸಲಾಗಿದೆ.

ಪ್ರವಾಹದ ನೀರಿನಲ್ಲಿ ಸಾವಿರಕ್ಕೂ ಅಧಿಕ ಮೃತದೇಹಗಳು ತೇಲಿಬರುತ್ತಿವೆ. ಜತೆಗೆ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಹಲವು ಮೃತದೇಹಗಳು ಕೊಳೆಯುತ್ತಿವೆ. ಮೃತದೇಹಗಳನ್ನು ಗುರುತಿಸಿ ಕುಟುಂಬದವರಿಗೆ ಹಸ್ತಾಂತರಿಸಲು ಸಮಯದ ಕೊರತೆ ಇರುವುದರಿಂದ ಲಿಬಿಯಾದ ಅಧಿಕಾರಿಗಳು ಈಗ ಮೃತದೇಹಗಳನ್ನು ಸಾಮೂಹಿಕ ಸಮಾಧಿ ಮಾಡುತ್ತಿದ್ದಾರೆ. ಭಾರೀ ನಾಶ-ನಷ್ಟ ಉಂಟಾಗಿರುವ ದೆರ್ನಾ ನಗರದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಸಾಮೂಹಿಕ ಅಂತ್ಯಸಂಸ್ಕಾರವು ಮೃತರ ಕುಟುಂಬದವರಲ್ಲಿ ದೀರ್ಘಾವಧಿಯ ಮಾನಸಿಕ ತೊಂದರೆ ಹಾಗೂ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗದ ಅಪಾಯಕ್ಕೆ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ‘ಮೃತದೇಹಗಳು ಬೀದಿಯಲ್ಲಿ ರಾಶಿಬಿದ್ದಿವೆ. ದಡಕ್ಕೆ ತೇಲಿಬರುತ್ತಿವೆ ಮತ್ತು ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಕೊಳೆಯುತ್ತಿವೆ. ದೆರ್ನಾ ನಗರದ ಬೀಚ್ ಬಳಿ ಸುಮಾರು 200 ಮೃತದೇಹಗಳು ಅನಾಥವಾಗಿ ಬಿದ್ದಿರುವುದನ್ನು ಕಂಡಿದ್ದೇವೆ’ ಎಂದು ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್ ನ ವಿಧಿವಿಜ್ಞಾನ ಅಧಿಕಾರಿ ಬಿಲಾಲ್ ಸಬ್ಲೋಹ್ ಹೇಳಿದ್ದಾರೆ. ‘ಅಂತರ್ಜಲವು ಮೃತದೇಹ, ಸತ್ತ ಪ್ರಾಣಿಗಳು, ತ್ಯಾಜ್ಯ ಮತ್ತು ರಾಸಾಯನಿಕ ಪದಾರ್ಥಗಳೊಂದಿಗೆ ಮಿಶ್ರಿತ ನೀರಿನಿಂದ ಕಲುಷಿತಗೊಂಡಿದ್ದು ದೆರ್ನಾ ಪ್ರದೇಶದಲ್ಲಿನ ಬಾವಿಯ ನೀರನ್ನು ಜನತೆ ಬಳಸಬಾರದು’ ಎಂದು ಲಿಬಿಯಾದ ಟ್ರಿಪೋಲಿಯಲ್ಲಿರುವ ಪಾಶ್ಚಿಮಾತ್ಯ ಬೆಂಬಲಿತ ಸರಕಾರದ ಆರೋಗ್ಯ ಸಚಿವ ಇಬ್ರಾಹಿಂ ಅಲ್-ಅರಬಿಯನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.

ದುರಂತದಿಂದ ಆಘಾತಕ್ಕೊಳಗಾದ ಸಮುದಾಯದಲ್ಲಿನ ಅಧಿಕಾರಿಗಳು ಸಾಮೂಹಿಕ ಸಮಾಧಿ ಅಥವಾ ಸಾಮೂಹಿಕ ಶವಸಂಸ್ಕಾರಗಳಿಗೆ ಮುಂದಾಗದಂತೆ ವಿಶ್ವಸಂಸ್ಥೆ ಆರೋಗ್ಯ ಸಂಘಟನೆ, ಅಂತರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಆಗ್ರಹಿಸಿದೆ. ಪ್ರತ್ಯೇಕ ಸಮಾಧಿಗಳ ವ್ಯವಸ್ಥೆ ಮಾಡುವ ಜತೆಗೆ ಮೃತದೇಹಗಳನ್ನು ಗುರುತಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮಾನಸಿಕ ಯಾತನೆ ಮತ್ತು ಸಾಮಾಜಿಕ ಹಾಗೂ ಕಾನೂನು ಸಮಸ್ಯೆಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News