ಮೆಕ್ಸಿಕೋ ದೂತಾವಾಸಕ್ಕೆ ನುಗ್ಗಿ ಮಾಜಿ ಉಪಾಧ್ಯಕ್ಷರನ್ನು ಬಂಧಿಸಿದ ಇಕ್ವೆಡಾರ್ ಪೊಲೀಸರು

Update: 2024-04-06 17:21 GMT

Photo : X/@SumitHansd

ಮೆಕ್ಸಿಕೋ: ಇಕ್ವೆಡಾರ್ ಮತ್ತು ಮೆಕ್ಸಿಕೋ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದ್ದು ಇಕ್ವೆಡಾರ್ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಅಮಾನತುಗೊಳಿಸಿರುವುದಾಗಿ ಮೆಕ್ಸಿಕೋ ಶನಿವಾರ ಘೋಷಿಸಿದೆ.

ಭ್ರಷ್ಟಾಚಾರ ಅಪರಾಧಕ್ಕೆ 2 ಬಾರಿ ಶಿಕ್ಷೆಗೆ ಗುರಿಯಾಗಿರುವ ಇಕ್ವೆಡಾರ್ ನ ಮಾಜಿ ಉಪಾಧ್ಯಕ್ಷ ಜಾರ್ಜ್ ಗ್ಲಾಸ್ ಕಳೆದ ಡಿಸೆಂಬರ್ ನಲ್ಲಿ ಇಕ್ವೆಡಾರ್ ನ ರಾಜಧಾನಿ ಕ್ವಿಟೋದಲ್ಲಿನ ಮೆಕ್ಸಿಕೋ ದೂತಾವಾಸದಲ್ಲಿ ಆಶ್ರಯ ಪಡೆದಿದ್ದರು. ದೂತಾವಾಸದಲ್ಲಿ ಆಶ್ರಯ ಪಡೆಯಲು ಮೆಕ್ಸಿಕೋ ಸರಕಾರ ಸಮ್ಮತಿಸಿತ್ತು.

ಈ ಮಧ್ಯೆ, ಶುಕ್ರವಾರ ಮೆಕ್ಸಿಕೋ ದೂತಾವಾಸ ಪ್ರವೇಶಿಸಿದ್ದ ಇಕ್ವೆಡಾರ್ ಪೊಲೀಸರು ಅವರನ್ನು ಬಲವಂತದಿಂದ ಬಂಧಿಸಿ ಕರೆದೊಯ್ದಿದ್ದರು. ಮೆಕ್ಸಿಕೋದ ಆಶ್ರಯ ಪ್ರಸ್ತಾವ ಕಾನೂನುಬಾಹಿರವಾಗಿದೆ ಎಂದು ಇಕ್ವೆಡಾರ್ ವಾದಿಸಿದೆ. `ರಾಜತಾಂತ್ರಿಕರಿಗೆ ಮತ್ತು ರಾಜತಾಂತ್ರಿಕ ನಿಯೋಗಕ್ಕೆ ನೀಡಲಾಗುವ ಸವಲತ್ತುಗಳನ್ನು ಮತ್ತು ವಿನಾಯಿತಿಗಳನ್ನು ಮೆಕ್ಸಿಕೋ ದುರುಪಯೋಗಪಡಿಸಿಕೊಂಡಿದೆ. ರಾಜತಾಂತ್ರಿಕ ಕಚೇರಿಯಲ್ಲಿ ಮಾಜಿ ಉಪಾಧ್ಯಕ್ಷರಿಗೆ ಸಾಂಪ್ರದಾಯಿಕ ಕಾನೂನು ಚೌಕಟ್ಟಿಗೆ ವಿರುದ್ಧವಾಗಿ ರಾಜತಾಂತ್ರಿಕ ಆಶ್ರಯಗಳನ್ನು ನೀಡಿದೆ' ಎಂದು ಇಕ್ವೆಡಾರ್ ಅಧ್ಯಕ್ಷರ ಕಚೇರಿ ಹೇಳಿದೆ. ಜತೆಗೆ ಇಕ್ವೆಡಾರ್ ನಲ್ಲಿರುವ ಮೆಕ್ಸಿಕೋ ರಾಯಭಾರಿ `ಸ್ವೀಕಾರಾರ್ಹವಲ್ಲದ ವ್ಯಕ್ತಿ' ಎಂದು ಘೋಷಿಸಿದೆ.

2013ರಿಂದ 2017ರವರೆಗೆ ಇಕ್ವೆಡಾರ್ ನ ಎಡಪಂಥೀಯ ಸರಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಗ್ಲಾಸ್, ಸರಕಾರದ ವಸತಿ ನಿರ್ಮಾಣ ಯೋಜನೆಯ ಗುತ್ತಿಗೆಯನ್ನು ಬ್ರೆಝಿಲ್‍ನ ನಿರ್ಮಾಣ ಸಂಸ್ಥೆಗೆ ಅಕ್ರಮವಾಗಿ ವಹಿಸಿಕೊಟ್ಟು ಅದಕ್ಕೆ ಪ್ರತಿಯಾಗಿ ಲಂಚ ಪಡೆದಿರುವ ಪ್ರಕರಣದಲ್ಲಿ 6 ವರ್ಷದ ಜೈಲುಶಿಕ್ಷೆಗೆ ಗುರಿಯಾಗಿದ್ದರು. 2022ರಲ್ಲಿ ಬಿಡುಗಡೆಗೊಂಡಿದ್ದರೂ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಜಾರ್ಜ್ ಗ್ಲಾಸ್, ಮೆಕ್ಸಿಕೋ ದೂತಾವಾಸದಲ್ಲಿ ರಾಜಕೀಯ ಆಶ್ರಯ ಪಡೆದಿದ್ದರು.

ಗ್ಲಾಸ್‍ರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ಇಕ್ವೆಡಾರ್ ಸರಕಾರ ಹೇಳಿದೆ. ಮೆಕ್ಸಿಕೋದ ದೂತಾವಾಸಕ್ಕೆ ನುಗ್ಗಿ ಮಾಜಿ ಉಪಾಧ್ಯಕ್ಷರನ್ನು ಬಂಧಿಸಿರುವುದು ಸರ್ವಾಧಿಕಾರಿ ಕೃತ್ಯವಾಗಿದೆ ಮತ್ತು ಅಂತರಾಷ್ಟ್ರೀಯ ಕಾನೂನು ಹಾಗೂ ಮೆಕ್ಸಿಕೋದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಮೆಕ್ಸಿಕೋ ಅಧ್ಯಕ್ಷ ಲೊಪೆಝ್ ಒಬ್ರಡಾರ್ ಖಂಡಿಸಿದ್ದು ಆ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದ್ದಾರೆ.

ಇಕ್ವೆಡಾರ್ ನಲ್ಲಿ ನಡೆದ ಹಿಂಸಾಚಾರವು ಅಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಮೆಕ್ಸಿಕೋ ಅಧ್ಯಕ್ಷರು ನೀಡಿರುವ ಹೇಳಿಕೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಇಕ್ವೆಡಾರ್ ನ ಮೆಕ್ಸಿಕೋ ದೂತಾವಾಸದಲ್ಲಿ ಆಶ್ರಯ ಪಡೆದಿರುವ ಜಾರ್ಜ್ ಗ್ಲಾಸ್, ಮೂರನೇ ದೇಶಕ್ಕೆ ತೆರಳಲು ಸುರಕ್ಷಿತ ಮಾರ್ಗದ ವ್ಯವಸ್ಥೆ ಮಾಡುವಂತೆ ಮೆಕ್ಸಿಕೋ ಸರಕಾರ ಆಗ್ರಹಿಸಿತ್ತು. `ಒಮ್ಮೆ ಆಶ್ರಯವನ್ನು ನೀಡಿದರೆ, ಆ ವ್ಯಕ್ತಿ ವಿದೇಶಕ್ಕೆ ತೆರಳಲು ವ್ಯವಸ್ಥೆ ಮಾಡುವಂತೆ ವಿನಂತಿಸಬಹುದು ಮತ್ತು ಪ್ರಾದೇಶಿಕ ದೇಶ(ಇಕ್ವೆಡಾರ್) ತಕ್ಷಣವೇ ಸಂಬಂಧಿತ ವ್ಯಕ್ತಿಗೆ ಸುರಕ್ಷಿತ ಮಾರ್ಗದ ವ್ಯವಸ್ಥೆ ಮಾಡಲು ಬದ್ಧವಾಗಿದೆ' ಎಂದು ಮೆಕ್ಸಿಕೋದ ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News