ಕೆನಡಾದಲ್ಲಿ ಉಗ್ರಗಾಮಿಗಳು ಆಶ್ರಯ ಪಡೆದಿದ್ದಾರೆ: ಜೈಶಂಕರ್

Update: 2023-09-30 17:37 GMT

                                                                    ಎಸ್. ಜೈಶಂಕರ್ | Photo: NDTV

ವಾಷಿಂಗ್ಟನ್ : ಕೆನಡಾವು ಭಯೋತ್ಪಾದಕರು, ಉಗ್ರಗಾಮಿಗಳು ಮತ್ತು ಹಿಂಸಾಚಾರವನ್ನು ಬಹಿರಂಗವಾಗಿ ಪ್ರತಿಪಾದಿಸುವ ಜನರ ಬಗ್ಗೆ ಅನುಮತಿಸುವ ಮನೋಭಾವನೆಯನ್ನು ಹೊಂದಿದೆ. ಕೆನಡಾ ರಾಜಕೀಯದ ಬಾಧ್ಯತೆಯ ಕಾರಣಕ್ಕೆ ಉಗ್ರಗಾಮಿಗಳಿಗೆ ಕೆನಡಾದಲ್ಲಿ ಕಾರ್ಯಾಚರಣೆಯ ಸ್ಥಳವನ್ನು ನೀಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ವಾಷಿಂಗ್ಟನ್ ನ ಹಡ್ಸನ್ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್, ಭಾರತದ ವಿರುದ್ಧ ಆಧಾರರಹಿತ ಆರೋಪವನ್ನು ಕೆನಡಾ ಮಾಡಿದ್ದರೂ ಬಾಗಿಲು ಇನ್ನೂ ಮುಚ್ಚಿಲ್ಲ. ಆದರೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು. ಭಾರತದ ದೃಷ್ಟಿಯಲ್ಲಿ ಕೆನಡಾವು ‘ಭಾರತದಿಂದ ಸಂಘಟಿತ ಅಪರಾಧಗಳು ಜನರ ಕಳ್ಳಸಾಗಣೆ, ಪ್ರತ್ಯೇಕತಾವಾದ, ಹಿಂಸಾಚಾರ, ಭಯೋತ್ಪಾದನೆಯೊಂದಿಗೆ ಬೆರೆಸಿದ ದೇಶವಾಗಿದೆ. ಇದು ಸಮಸ್ಯೆಗಳು ಮತ್ತು ಅಲ್ಲಿ ಕಾರ್ಯಾಚರಣಾ ಸ್ಥಳವನ್ನು ಕಂಡುಕೊಂಡ ಜನರ ಅತ್ಯಂತ ವಿಷಕಾರಿ ಸಂಯೋಜನೆಯಾಗಿದೆ. ಆ ದೇಶದಲ್ಲಿ ಭಾರತೀಯ ರಾಜತಾಂತ್ರಿಕರು ಅಸುರಕ್ಷಿತರಾಗಿದ್ದಾರೆ’ ಎಂದು ಜೈಶಂಕರ್ ಒತ್ತಿ ಹೇಳಿದ್ದಾರೆ.

ಮೋದಿ ಸರಕಾರ ಸಿಖ್ ಸಮುದಾಯದ ಸಮಸ್ಯೆಗಳ ಬಗ್ಗೆ ಬಹಳಷ್ಟು ಗಮನ ನೀಡಿದೆ. ಉಗ್ರಗಾಮಿ ಶಕ್ತಿಗಳು ಅಲ್ಪಪ್ರಮಾಣದಲ್ಲಿದ್ದು ಇವರು ಸಂಪೂರ್ಣ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಅಂತೆಯೇ ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳ ಗುಂಪಿನ ನಿಲುವು, ಅಭಿಪ್ರಾಯವನ್ನು ಅಲ್ಲಿನ ಸಿಖ್ ಸಮುದಾಯದ ನಿಲುವು, ಧೋರಣೆ ಎಂದು ಪರಿಗಣಿಸುವಂತಿಲ್ಲ. ಖಾಲಿಸ್ತಾನಿ ವಿಷಯವು ಸಿಖ್ ಸಮುದಾಯದ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ಕೆನಡಾದ ಬಳಿ ನಿರ್ಧಿಷ್ಟ ಪುರಾವೆಗಳಿದ್ದರೆ ಅದನ್ನು ವೀಕ್ಷಿಸಲು ಭಾರತ ಸಿದ್ಧವಿದೆ. ಬಾಗಿಲು ಇನ್ನೂ ಮುಚ್ಚಿಲ್ಲ. ಆದರೆ ಸೂಕ್ತ ಪುರಾವೆ ಒದಗಿಸುವುದು ಅತ್ಯಂತ ಮುಖ್ಯವಾಗಿದೆ’ ಎಂದು ಜೈಶಂಕರ್ ಹೇಳಿದರು. ಭಾರತ-ರಶ್ಯ ದ್ವಿಪಕ್ಷೀಯ ಸಂಬಂಧದ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಭಾರತ-ರಶ್ಯ ಸಂಬಂಧಗಳು ಅದ್ಭುತವಾಗಿಲ್ಲದಿರಬಹುದು. ಆದರೆ ಅಸಾಧಾರಣ ಮತ್ತು ಸ್ಥಿರವಾಗಿದೆ. ಕಳೆದ 70 ವರ್ಷಗಳಲ್ಲಿ ಅಂತರಾಷ್ಟ್ರೀಯ ಸಂಬಂಧಗಳನ್ನು ಪರಿಗಣಿಸಿದರೆ, ಅಮೆರಿಕ-ರಶ್ಯ ಸಂಬಂಧಗಳು, ಚೀನಾ-ರಶ್ಯ ಸಂಬಂಧಗಳು, ಅಮೆರಿಕ-ಚೀನಾ ಸಂಬಂಧಗಳು ಹೀಗೆ ಪ್ರತಿಯೊಂದು ದೊಡ್ಡ ಸಂಬಂಧಗಳೂ ಬಹಳಷ್ಟು ಏರಿಳಿತಗಳನ್ನು ಕಂಡಿದೆ. ಭಾರತ -ರಶ್ಯ ಸಂಬಂಧ ಬಹಳ ಸ್ಥಿರವಾಗಿದೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News