ಕೆಂಪು ಸಮುದ್ರದಲ್ಲಿ ಹೌದಿ ದಾಳಿ ಹತ್ತಿಕ್ಕುವ ಒಕ್ಕೂಟಕ್ಕೆ 20 ರಾಷ್ಟ್ರಗಳ ಸೇರ್ಪಡೆ: ಅಮೆರಿಕ

Update: 2023-12-22 16:07 GMT

Photo: news18.com

ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಜಾಗತಿಕ ವ್ಯಾಪಾರಕ್ಕೆ ಅಡ್ಡಿಯಾಗಿರುವ ಹೌದಿ ದಾಳಿಗಳನ್ನು ಹತ್ತಿಕ್ಕಲು ರಚಿಸಲಾಗಿರುವ ಜಾಗತಿಕ ಒಕ್ಕೂಟಕ್ಕೆ 20 ರಾಷ್ಟ್ರಗಳು ಕೈಜೋಡಿಸಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಘೋಷಿಸಿದೆ.

ಇರಾನ್ ಬೆಂಬಲಿತ ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಟ್ಯಾಂಕರ್‍ ಗಳು, ಸರಕು ಹಡಗುಗಳು ಮತ್ತು ಇತರ ಹಡಗುಗಳ ಮೇಲೆ ದಾಳಿಯನ್ನು ಹೆಚ್ಚಿಸಿದ್ದು ಇದು ಇದು ಜಾಗತಿಕ ವ್ಯಾಪಾರದ 12%ದಷ್ಟು ಸಾಗುವ ಸಾರಿಗೆ ಮಾರ್ಗವನ್ನು ದುರ್ಬಲಗೊಳಿಸಿದೆ.

ನೌಕಾಯಾನ ಸ್ವಾತಂತ್ರ್ಯದ ತಳಹದಿಯನ್ನು ಎತ್ತಿಹಿಡಿಯ ಬಯಸುವ ದೇಶಗಳು ಈ ಒಕ್ಕೂಟಕ್ಕೆ ಸೇರ್ಪಡೆಗೊಂಡಿವೆ. ಒಪ್ಪಂದಕ್ಕೆ ಸಹಿ ಹಾಕಿರುವ ಕನಿಷ್ಟ 8 ದೇಶಗಳು ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಆಗ್ರಹಿಸಿವೆ. ಇತರ ದೇಶಗಳಿಗೂ ಈ ಒಕ್ಕೂಟದ ಸದಸ್ಯರಾಗಲು ಅವಕಾಶವಿದೆ. ಪ್ರತಿಯೊಂದು ದೇಶವೂ ತಮ್ಮಿಂದಾದ ಕೊಡುಗೆಯನ್ನು ನೀಡಲಿದೆ. ಇದು ಇಚ್ಛೆಯ ಒಕ್ಕೂಟವಾಗಿದ್ದು ಹಡಗು, ಸಿಬಂದಿ ಅಥವಾ ಇತರ ರೀತಿಯ ಬೆಂಬಲವನ್ನು ಒದಗಿಸಬಹುದು ಎಂದು ಅಮೆರಿಕ ರಕ್ಷಣಾ ಪಡೆಯ ಮೇಜರ್ ಜನರಲ್ ಪ್ಯಾಟ್ರಿಕ್ ರೈಡರ್ ಹೇಳಿದ್ದಾರೆ.

ಯೆಮನ್ ಬಳಿಯ ಕೆಂಪು ಸಮುದ್ರದಲ್ಲಿ ಜಂಟಿ ಗಸ್ತುಗಳನ್ನು ಒಳಗೊಂಡಿರುವ ಪ್ರಯತ್ನವಾದ `ಆಪರೇಷನ್ ಪ್ರಾಸ್ಪಾರಿಟಿ ಗಾರ್ಡಿಯನ್' ಅನ್ನು ಅಮೆರಿಕ 2 ದಿನಗಳ ಹಿಂದೆ ಆರಂಭಿಸಿದೆ. ಕೆಂಪು ಸಮುದ್ರದಲ್ಲಿ ಅಮೆರಿಕ, ಫ್ರಾನ್ಸ್ ಹಾಗೂ ಬ್ರಿಟನ್ ದೇಶಗಳು ಸಮರನೌಕೆಯನ್ನು ಈ ಹಿಂದೆಯೇ ನಿಯೋಜಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News