‘ಅರುಂಧತಿ ರಾಯ್ ಕೈ ಮೇಲೆತ್ತಿಸಿ ಮೋದಿ’: ಭಾರತೀಯ ಪ್ರಧಾನಿಯನ್ನು ವ್ಯಂಗ್ಯವಾಡಿದ ಮಾಜಿ ಗ್ರೀಕ್ ಹಣಕಾಸು ಸಚಿವ
ಹೊಸದಿಲ್ಲಿ: 2010ರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣ ಎದುರಿಸುತ್ತಿರುವ ಖ್ಯಾತ ಭಾರತೀಯ ಬರಹಗಾರ್ತಿ ಅರುಂಧತಿ ರಾಯ್ ವಿಚಾರಣೆಗೆ ಅನುಮತಿ ನೀಡಲು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ನಿರ್ಧರಿಸಿರುವ ಬೆನ್ನಿಗೇ, ಅವರ ಪರವಾಗಿ ಗ್ರೀಕ್ ರಾಜಕಾರಣಿ ಹಾಗೂ ಮಾಜಿ ಹಣಕಾಸು ಸಚಿವ ಯಾನಿಸ್ ವರೌಫೇಕಿಸ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನುದ್ದೇಶಿಸಿ ಪ್ರಬಲ ಸಂದೇಶ ರವಾನಿಸಿರುವ ವರೌಫೇಕಿಸ್, “ಅರುಂಧತಿ ರಾಯ್ ಭಾರತದ, ಬಹುಶಃ ವಿಶ್ವದ ಅತ್ಯುತ್ತಮ ಬರಹಗಾರ್ತಿಯಾಗಿದ್ದಾರೆ. ಆಕೆಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದರಿಂದ ಪ್ರಾಧಿಕಾರಗಳು ದೂರ ಉಳಿಯಬೇಕು” ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವರೌಫೇಕಿಸ್, “ಮಾನ್ಯ ಮೋದಿ, ಅರುಂಧತಿ ರಾಯ್ ಅವರ ಕೈಯನ್ನು ಮೇಲೆತ್ತಿಸಿ, ಭಾರತದ, ಬಹುಶಃ ವಿಶ್ವದ ಅತ್ಯುತ್ತಮ ಬರಹಗಾರ್ತಿ ಅವರು” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
2010ರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಹಾಗೂ ಕಾಶ್ಮೀರದ ಮಾಜಿ ಪ್ರಾಧ್ಯಾಪಕ ಶೇಖ್ ಶೌಕತ್ ಹುಸೈನ್ ಅವರ ವಿಚಾರಣೆ ನಡೆಸಲು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮತಿ ನೀಡಿದ ನಂತರ ಈ ಬೆಳವಣಿಗೆಗಳು ನಡೆದಿವೆ. ಅಕ್ಟೋಬರ್ 21, 2010ರಂದು ದಿಲ್ಲಿಯ ಕೋಪರ್ನಿಕಸ್ ಮಾರ್ಗದಲ್ಲಿರುವ ಎಲ್ಟಿಜಿ ಆಡಿಟೋರಿಯಂನಲ್ಲಿ ರಾಜಕೀಯ ಕೈದಿಗಳ ಬಿಡುಗಡೆ ಸಮಿತಿಯು ಆಯೋಜಿಸಿದ್ದ “ಸ್ವಾತಂತ್ರ್ಯ – ಒಂದೇ ದಾರಿ” ಶೀರ್ಷಿಕೆಯ ವಿಚಾರಗೋಷ್ಠಿಯಲ್ಲಿ ಅರುಂಧತಿ ರಾಯ್, ಶೇಖ್ ಶೌಕತ್ ಹುಸೈನ್ ಸೇರಿದಂತೆ ಹಲವು ವ್ಯಕ್ತಿಗಳು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್ ಸಲ್ಲಿಸಿದ್ದ ದೂರನ್ನು ಆಧರಿಸಿ ಈ ಪ್ರಕರಣ ದಾಖಲಾಗಿತ್ತು.