ಮ್ಯಾನ್ಮಾರ್ | ರೊಹಿಂಗ್ಯಾಗಳ ಮೇಲಿನ ಮಿಲಿಟರಿ ದಾಳಿಗೆ ವಿಶ್ವಸಂಸ್ಥೆ ಖಂಡನೆ
ವಿಶ್ವಸಂಸ್ಥೆ : ಪಶ್ಚಿಮದ ರಾಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಮಿಲಿಟರಿಯ ಕಾರ್ಯಾಚರಣೆಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ದಾಳಿಯನ್ನು ಖಂಡಿಸಿದ್ದಾರೆ.
ಉತ್ತರದ ಸಗಯಂಗ್ ವಲಯದ ಮಾಥವ್ ಗ್ರಾಮದ ಮೇಲೆ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನಿಷ್ಟ 12 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ದೇಶದಾದ್ಯಂತ ವಿವೇಚನಾರಹಿತ ಬಾಂಬ್ ದಾಳಿ ಮುಂದುವರಿದಿದ್ದು ಇದಕ್ಕೆ ಹೊಣೆಗಾರರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುಟೆರಸ್ ಒತ್ತಾಯಿಸಿದ್ದಾರೆ.
ಜನಾಂಗೀಯ ಅಲ್ಪಸಂಖ್ಯಾತ ಸಶಸ್ತ್ರ ಗುಂಪು `ಅರಕಾನ್ ಆರ್ಮಿ(ಎಎ)' ನವೆಂಬರ್ ನಲ್ಲಿ ಮಿಲಿಟರಿ ಪಡೆಗಳ ಮೇಲೆ ದಾಳಿ ನಡೆಸುವ ಮೂಲಕ 2021ರಿಂದ ಜಾರಿಯಲ್ಲಿದ್ದ ಕದನವಿರಾಮ ಅಂತ್ಯಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಇತ್ತೀಚೆಗೆ ಸೇನಾಪಡೆ ರಾಖೈನ್ ರಾಜ್ಯದ ಬ್ಯಾನ್‍ಫುಯು ಗ್ರಾಮದ ಮೇಲೆ ದಾಳಿ ನಡೆಸಿ 70ಕ್ಕೂ ಅಧಿಕ ನಾಗರಿಕರನ್ನು ಹತ್ಯೆ ಮಾಡಿದೆ . ಸುಮಾರು 6 ಲಕ್ಷ ರೊಹಿಂಗ್ಯಾಗಳೂ ನೆಲೆ ಕಂಡುಕೊಂಡಿರುವ ರಾಖೈನ್‍ನಲ್ಲಿ ಜನಾಂಗೀಯ ರಾಖೈನ್ ಸಮುದಾಯಕ್ಕೆ ಹೆಚ್ಚಿನ ಸ್ವಾಯತ್ತೆಗಾಗಿ ತಾನು ಹೋರಾಡುತ್ತಿದ್ದೇನೆ ಎಂದು ಅರಕಾನ್ ಆರ್ಮಿ ಹೇಳಿದೆ. ಆದರೆ ಇದು ಸುಳ್ಳು ಸುದ್ಧಿ ಎಂದು ಸೇನಾಡಳಿತ ಪ್ರತಿಕ್ರಿಯಿಸಿದೆ. . ರಾಖೈನ್ ರಾಜ್ಯದಾದ್ಯಂತ ಇಂಟರ್‍ನೆಟ್ ಮತ್ತು ಫೋನ್ ಸೇವೆಗಳನ್ನು ಕಡಿತಗೊಳಿಸಲಾಗಿದೆ. ಸೇನಾಡಳಿತ ಮತ್ತು ಎಎ ನಡುವೆ ಸಿಕ್ಕಿಬಿದ್ದಿರುವ ರೊಗಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಮನ ಕಾರ್ಯವನ್ನು ಅಂತ್ಯಗೊಳಿಸುವಂತೆ ಗುಟೆರಸ್ ಆಗ್ರಹಿಸಿದ್ದಾರೆ.
ಈ ಮಧ್ಯೆ, ಅರಕಾನ್ ಆರ್ಮಿ ರೊಹಿಂಗ್ಯಾ ಸಮುದಾಯದ ಸಾವಿರಾರು ಸದಸ್ಯರನ್ನು ಬಲವಂತದಿಂದ ತೆರವುಗೊಳಿಸಿ ಅವರ ಮನೆಗಳಿಗೆ ಬೆಂಕಿಹಚ್ಚಿದೆ. ಮತ್ತೊಂದೆಡೆ ಸೇನಾಡಳಿತವು ಎಎ ವಿರುದ್ಧ ಹೋರಾಡಲು ರೊಹಿಂಗ್ಯಾ ಯುವಜನರನ್ನು ಬಲವಂತದಿಂದ ಸೇನೆಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ರೊಹಿಂಗ್ಯಾ ಕಾರ್ಯಕರ್ತರು ಆರೋಪಿಸಿದ್ದಾರೆ.