ನವಾಝ್ ಶರೀಫ್ ಚುನಾವಣೆಗೆ ಸ್ಪರ್ಧಿಸಬಹುದು: ಪಾಕ್ ಸಚಿವ
ಇಸ್ಲಾಮಾಬಾದ್: ಮಾಜಿ ಪ್ರಧಾನಿ, ಪಾಕಿಸ್ತಾನ್ ಮುಸ್ಲಿಂಲೀಗ್ ನವಾಝ್ (ಪಿಎಂಎಲ್-ಎನ್) ಪಕ್ಷದ ಮುಖಂಡ ನವಾಝ್ ಶರೀಫರ ಜೀವಮಾನದ ಅನರ್ಹತೆ ಕೊನೆಗೊಂಡಿದ್ದು ಅವರು ಚುನಾವಣೆಗೆ ಸ್ಪರ್ಧಿಸಬಹುದಾಗಿದೆ ಎಂದು ಪಾಕಿಸ್ತಾನದ ಕಾನೂನು ಸಚಿವ ಅಝಮ್ ನಝೀರ್ ತರಾರ್ ಹೇಳಿದ್ದಾರೆ. ಗರಿಷ್ಠ ಅನರ್ಹತೆ ಅವಧಿ 5 ವರ್ಷವಾಗಿರುವುದರಿಂದ ನವಾಝ್ ಶರೀಫ್ಗೆ ವಿಧಿಸಿದ್ದ ಅನರ್ಹತೆ ತೆರವಾಗಿದೆ.
ಈಗಿನ ರಾಜಕೀಯ ಪರಿಸ್ಥಿತಿ ಗಮನಿಸಿದರೆ ರಾಷ್ಟ್ರೀಯ ಅಸೆಂಬ್ಲಿ(ಸಂಸತ್ತು)ಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದವರು ಹೇಳಿದ್ದಾರೆ. ಜೀವಮಾನದ ಅನರ್ಹತೆಯನ್ನು 5 ವರ್ಷಕ್ಕೆ ಸೀಮಿತಗೊಳಿಸುವ ಕಾನೂನು ತಿದ್ದುಪಡಿಗೆ ಕಳೆದ ತಿಂಗಳು ಪಾಕಿಸ್ತಾನದ ಅಸೆಂಬ್ಲಿ ಅನುಮೋದನೆ ನೀಡಿದೆ.
ನವಾಝ್ ಶರೀಫ್ಗೆ ಅನುಕೂಲ ಮಾಡಿಕೊಡಲು ಈ ತಿದ್ದುಪಡಿ ಮಾಡಲಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಸಚಿವ ನಝೀರ್ ತರಾರ್ ‘ಸಮ್ಮಿಶ್ರ ಸರಕಾರದ ಮಿತ್ರಪಕ್ಷಗಳ ಜತೆ ಚರ್ಚಿಸಿ ಅವರ ಸಹಮತ ಪಡೆದ ಬಳಿಕ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಅನುಮೋದಿಸಲಾಗಿದೆ. ನಾವು ಸಂಸತ್ತು ತಿರಸ್ಕರಿಸಿದ ತಿದ್ದುಪಡಿಯನ್ನು ಜಾರಿಗೊಳಿಸಿಲ್ಲ’ ಎಂದು ಹೇಳಿದರು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ನವಾಝ್ ಶರೀಫ್ಗೆ ಚುನಾವಣೆಗೆ ಸ್ಪರ್ಧಿಸದಂತೆ 2017ರಲ್ಲಿ ಜೀವಾವಧಿ ನಿಷೇಧ ವಿಧಿಸಲಾಗಿತ್ತು.