ಇರಾನಿನ ಪರಮಾಣು ಸ್ಥಾವರಗಳಿಗೆ ದಾಳಿ ನಡೆಸುವುದಿಲ್ಲ: ಅಮೆರಿಕಕ್ಕೆ ಇಸ್ರೇಲ್ ಭರವಸೆ
ವಾಶಿಂಗ್ಟನ್ : ಇರಾನ್ ಕಳೆದ ವಾರ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಇಸ್ರೇಲ್ ನ ಪ್ರತೀಕಾರವು ಮಿಲಿಟರಿಯೇತರ ತಾಣಗಳ ಮೇಲೆ ದಾಳಿಯನ್ನು ಒಳಗೊಂಡಿರುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭರವಸೆ ನೀಡಿರುವುದಾಗಿ ಅಮೆರಿಕ ಹೇಳಿದೆ.
ಅಮೆರಿಕದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಯೋಜಿತ ಪ್ರತೀಕಾರ ಕ್ರಮವನ್ನು ಮೊಟಕುಗೊಳಿಸಿದ್ದಾರೆ. ಅಲ್ಲದೆ ಅಮೆರಿಕವು ಇಸ್ರೇಲ್ ಗೆ ಅತ್ಯಾಧುನಿಕ ಥಾಡ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಒದಗಿಸಿರುವುದು ನೆತನ್ಯಾಹು ತನ್ನ ಬಿಗಿ ನಿಲುವು ಸಡಿಲಿಸಲು ಕಾರಣವಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ವಾಶಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಲೆಬನಾನ್ ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿರುವುದಕ್ಕೆ ಪ್ರತೀಕಾರವಾಗಿ ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಇರಾನ್ ದಾಳಿಗೆ ಸೂಕ್ತ ರೀತಿಯಲ್ಲಿ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದೆ.
ಇಸ್ರೇಲಿನ ಪ್ರತೀಕಾರ ಯೋಜನೆಯ ಬಗ್ಗೆ ಚರ್ಚಿಸಲು ಅಕ್ಟೋಬರ್ 8ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ ಕರೆ ಮಾಡಿದ್ದ ನೆತನ್ಯಾಹು, ಇರಾನಿನ ಮಿಲಿಟರಿ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಇರಾನಿನ ತೈಲ ಮೂಲಸೌಕರ್ಯ ಅಥವಾ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಲು ಇಸ್ರೇಲ್ ಈ ಹಿಂದೆ ಚಿಂತನೆ ನಡೆಸಿತ್ತು. ಆದರೆ ಹೀಗೆ ಮಾಡಿದರೆ ಸಂಘರ್ಷ ಉಲ್ಬಣಗೊಳ್ಳಲಿದೆ. ಇಸ್ರೇಲ್ ಹಾಗೂ ಪಾಶ್ಚಿಮಾತ್ಯರ ಮಿತ್ರದೇಶಗಳ ವಿರುದ್ಧವೂ ಇರಾನ್ ಪ್ರತೀಕಾರ ದಾಳಿ ನಡೆಸಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು. ಕೆಲವು ಗಲ್ಫ್ ದೇಶಗಳೂ ಇರಾನಿನ ಪರಮಾಣು ಸ್ಥಾವರದ ಮೇಲೆ ಇಸ್ರೇಲ್ ದಾಳಿ ನಡೆಸುವುದನ್ನು ವಿರೋಧಿಸಿವೆ ಎಂದು ವರದಿಯಾಗಿದೆ.
ತೈಲ ಕ್ಷೇತ್ರಗಳ ಮೇಲಿನ ದಾಳಿಯು ತೈಲ ದರಗಳ ಏರಿಕೆಗೆ ಕಾರಣವಾಗಲಿದೆ. ಪರಮಾಣು ಸ್ಥಾವರಗಳ ಮೇಲಿನ ದಾಳಿಯು ಯುದ್ಧದ ವ್ಯಾಪ್ತಿಯನ್ನು ಹಿಗ್ಗಿಸಬಹುದು ಮತ್ತು ಸಂಘರ್ಷಕ್ಕೆ ಅಮೆರಿಕವನ್ನೂ ಎಳೆದು ತರುವ ಸಾಧ್ಯತೆಯಿದೆ. ಇಂತಹ ಬೆಳವಣಿಗೆಯು ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ಗೆೆ ಹಿನ್ನಡೆ ತರಬಹುದು ಎಂದು ವರದಿ ಹೇಳಿದೆ.
ಈ ವರದಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಮಂತ್ರಿ ಕಚೇರಿಯ ವಕ್ತಾರರು `ನಾವು ಅಮೆರಿಕ ಸರಕಾರದ ಚಿಂತನೆಗಳಿಗೆ ಕಿವಿಕೊಡುತ್ತೇವೆ. ಆದರೆ ಇಸ್ರೇಲಿನ ರಾಷ್ಟ್ರೀಯ ಭದ್ರತಾ ಅಗತ್ಯಗಳನ್ನು ಆಧರಿಸಿ ನಮ್ಮ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ' ಎಂದಿದ್ದಾರೆ.