ಅಧ್ಯಕ್ಷಾವಧಿ ಮುಗಿದಿರುವ ಝೆಲೆನ್‍ಸ್ಕಿ ಕಾನೂನುಬದ್ಧತೆ ಹೊಂದಿಲ್ಲ : ಪುಟಿನ್
ಮಾಸ್ಕೋ : ಉಕ್ರೇನ್‍ನ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಅವರ 5 ವರ್ಷದ ಕಾರ್ಯಾವಧಿ ಮುಗಿದಿರುವುದರಿಂದ ಅವರು ಈಗ ಯಾವುದೇ ಕಾನೂನುಬದ್ಧ ಅರ್ಹತೆ ಹೊಂದಿಲ್ಲ. ಇದು ರಶ್ಯ- ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆಯಲು ಬಹುದೊಡ್ಡ ತಡೆಯಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಝೆಲೆನ್‍ಸ್ಕಿ ಅವರ ಕಾರ್ಯಾವಧಿ ಈ ವಾರ ಅಂತ್ಯಗೊಂಡಿದೆ. ಆದರೆ ಕಳೆದ ಮೂರು ವರ್ಷಗಳಿಂದ ರಶ್ಯದ ಎದುರು ಯುದ್ಧ ನಡೆಯುತ್ತಿರುವುದರಿಂದ ಅವರು ಯುದ್ಧ ಅಂತ್ಯಗೊಳ್ಳುವವರೆಗೆ ಅಥವಾ ಕದನ ವಿರಾಮ ಜಾರಿಗೊಳ್ಳುವ ತನಕ ನೂತನ ಚುನಾವಣೆ ಎದುರಿಸುವ ಸಾಧ್ಯತೆಯಿಲ್ಲ.
ಈಗಿನ ಮುಂಚೂಣಿ ನೆಲೆಗಳನ್ನು ಗುರುತಿಸುವ (ರಶ್ಯ ಸ್ವಾಧೀನಕ್ಕೆ ಪಡೆದಿರುವ ಉಕ್ರೇನ್ ಪ್ರದೇಶಗಳನ್ನು ರಶ್ಯದ ಪ್ರದೇಶಗಳೆಂದು ಮಾನ್ಯ ಮಾಡುವ) ಸಂಧಾನ ಮಾತುಕತೆಗೆ ಸಿದ್ಧ ಎಂದು ಪುಟಿನ್ ಹೇಳಿರುವುದಾಗಿ ರಶ್ಯನ್ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬೆಲಾರುಸ್‍ಗೆ ಭೇಟಿ ನೀಡಿರುವ ಪುಟಿನ್ ಅಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ` ನಾವು ಕದನ ವಿರಾಮ ಮಾತುಕತೆಗೆ ಸಿದ್ಧವಿದ್ದೇವೆ. ಆದರೆ ಇಲ್ಲಿ ಝೆಲೆನ್‍ಸ್ಕಿಯ ಸ್ಥಾನಮಾನದ ಸಮಸ್ಯೆ ಎದುರಾಗಿದೆ. ಯಾರೊಂದಿಗೆ ಮಾತುಕತೆ ನಡೆಸುವುದು. ಝೆಲೆನ್‍ಸ್ಕಿಯ ಕಾನೂನುಬದ್ಧ ಅಧಿಕಾರಾವಧಿ ಅಂತ್ಯಗೊಂಡಿದೆ' ಎಂದು ಹೇಳಿದರು.