ಇಸ್ರೇಲಿ ಕ್ಷಿಪಣಿಗೆ ಸಹಿ ಮಾಡಿ 'ಅವರನ್ನು ಮುಗಿಸಿ' ಎಂದ ನಿಕ್ಕಿ ಹ್ಯಾಲೆ!
ಟೆಲ್ ಅವೀವ್ : ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಅವರು ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಇಸ್ರೇಲ್ ನ ಫಿರಂಗಿ ಶೆಲ್‌ಗಳಿಗೆ "ಅವರನ್ನು ಮುಗಿಸಿ!" ಎಂಬ ಸಂದೇಶ ಬರೆದು ವಿವಾದ ಹುಟ್ಟುಹಾಕಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ಮಿಲಿಟರಿಯಿಂದ ನಡೆಯುತ್ತಿರುವ ವಿನಾಶಕಾರಿ ಆಕ್ರಮಣದಿಂದಾಗಿ 15 ಸಾವಿರ ಮ್ಕಕಳು ಸೇರಿದಂತೆ 36 ಸಾವಿರ ಫೆಲೆಸ್ತೀನಿ ನಾಗರಿಕರು ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಫೆಲೆಸ್ತೀನಿನ ರಫಾ ನಗರದಲ್ಲಿ ಸ್ಥಳಾಂತರಗೊಂಡಿರುವ ನಿರಾಶ್ರಿತರ ಶಿಬಿರದ ಮೇಲೆ ಇತ್ತೀಚೆಗೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ಜಾಗತಿಕ ಖಂಡನೆಗೆ ಕಾರಣವಾಯಿತು.
ಈ ಮಧ್ಯೆ ಇಸ್ರೇಲ್ ಗೆ ಭೇಟಿ ನೀಡಿರುವ ನಿಕ್ಕಿ ಹ್ಯಾಲೆ ಇಸ್ರೇಲ್‌ಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಗಾಝಾ ನಗರವಾದ ರಫಾದ ಮೇಲೆ ಇಸ್ರೇಲಿ ದಾಳಿಗೆ ಹಿನ್ನಡೆಯಾಗಲು ಶಸ್ತ್ರಾಸ್ತ್ರಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತವನ್ನು ಅವರು ಟೀಕಿಸಿದ್ದಾರೆ. ಅಲ್ಲದೇ, ನೆತನ್ಯಾಹು ಅವರ ಬಂಧನವನ್ನು ಬಯಸುತ್ತಿರುವ ಮತ್ತು ಇಸ್ರೇಲ್ ವಿರುದ್ಧ ನರಮೇಧದ ಆರೋಪಗಳನ್ನು ಪರಿಗಣಿಸುತ್ತಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯವನ್ನು (ICJ) ನಿಕ್ಕಿ ಖಂಡಿಸಿದ್ದಾರೆ.
‘Finish them!’ was the message former US presidential hopeful Nikki Haley wrote on Israeli artillery shells intended for Gaza, sparking outrage online. pic.twitter.com/ywcCiZjrTU
— Al Jazeera English (@AJEnglish) May 29, 2024
ನಿಕ್ಕಿ ಹ್ಯಾಲಿ ಕ್ಷಿಪಣಿಗೆ ಸಹಿ ಹಾಕಿದ ಫೋಟೋವನ್ನು ಹಲವಾರು ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿಯ ಕ್ರಮಕ್ಕೆ, ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಟೀಕಿಸಿದ್ದಾರೆ. ಈಗ ಗಾಝಾ – ರಫಾದಲ್ಲಿ ನಡೆಯುತ್ತಿರುವ ಸಾವು ಮತ್ತು ವಿನಾಶವನ್ನು ತಡೆಯುವ ಆಯುಧವೇನಾದರೂ ಇದ್ದರೆ, ಅದಕ್ಕೆ ಸಹಿ ಮಾಡುವಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಜನ್ಯ : indiatoday.in