ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹಾಗಾರರಾಗಲಿರುವ ನೋಬೆಲ್ ಪ್ರಶಸ್ತಿ ವಿಜೇತ ಡಾ. ಮುಹಮ್ಮದ್ ಯೂನುಸ್
ಢಾಕಾ: ನೋಬೆಲ್ ಪ್ರಶಸ್ತಿ ವಿಜೇತ ಡಾ. ಮುಹಮ್ಮದ್ ಯೂನುಸ್ ಅವರು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹಾಗಾರರರಾಗಲಿದ್ದಾರೆ ಎಂದು ಅಲ್ಲಿನ ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಘಟಕರು ಹೇಳಿದ್ದಾರೆ.
ಆಂದೋಲನದ ಪ್ರಮುಖ ಸಂಘಟಕರಲ್ಲೊಬ್ಬರಾದ ನಹೀದ್ ಇಸ್ಲಾಂ ಸಾಮಾಜಿಕ ಜಾಲತಾಣದಲ್ಲಿ ಇಂದು ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಈ ಮಾಹಿತಿ ನೀಡಿದ್ದಾರೆ. ದೇಶವನ್ನು ಉಳಿಸಲು ವಿದ್ಯಾರ್ಥಿ ಸಮುದಾಯದ ಕೋರಿಕೆಯಂತೆ ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಪ್ರೊ. ಯೂನುಸ್ ಒಪ್ಪಿದ್ದಾರೆ ಎಂದು ಹೇಳಿದರು.
ವೀಡಿಯೋದಲ್ಲಿ ನಹೀದ್ ಜೊತೆ ಆಂದೋಲನದ ಇನ್ನೂ ಇಬ್ಬರು ಸಂಘಟಕರು ಕಾಣಿಸಿಕೊಂಡಿದ್ದಾರೆ. “ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ ನೋಬೆಲ್ ಪ್ರಶಸ್ತಿ ವಿಜೇತ ಹಾಗೂ ಎಲ್ಲರೂ ಒಪ್ಪಿಕೊಳ್ಳುವಂತಹ ವ್ಯಕ್ತಿಯಾಗಿರುವ ಡಾ ಮೊಹಮ್ಮದ್ ಯೂನುಸ್ ಮುಖ್ಯ ಸಲಹೆಗಾರರಾಗಿದ್ದುಕೊಂಡು ಹಂಗಾಮಿ ಸರ್ಕಾರ ರಚಿಸಬೇಕೆಂದು ನಾವು ನಿರ್ಧರಿಸಿದ್ದೇವೆ,” ಎಂದು ಅವರು ಹೇಳಿದರು.
ಸಂಸತ್ತನ್ನು ಆದಷ್ಟು ಬೇಗ ವಿಸರ್ಜಿಸಿದ ನಂತರ ಹಂಗಾಮಿ ಸರ್ಕಾರ ರಚಿಸಲಾಗುವುದು ಎಂದು ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಈ ಹಿಂದೆ ಹೇಳಿದ್ದರು.
“ಆದಷ್ಟು ಬೇಗ ಹಂಗಾಮಿ ಸರ್ಕಾರ ರಚನೆಯಾಗಬೇಕೆಂದು ವಿದ್ಯಾರ್ಥಿ ನಾಯಕರು ಆಗ್ರಹಿಸಿದ್ದು, ಹಿಂಸೆಗೆ ಅಧಿಕಾರದಿಂದ ಹೊರದಬ್ಬಲ್ಪಟ್ಟ ಫ್ಯಾಸಿಸ್ಟರು ಮತ್ತು ಅವರ ಸಹಯೋಗಿಗಳು ಕಾರಣ,”: ಎಂದು ನಹೀದ್ ಹೇಳಿದ್ದಾರೆ.