ಹಿಂಸಾಚಾರದಿಂದಾಗಿ ಉತ್ತರ ಗಾಝಾ ಪೋಲಿಯೊ ಅಭಿಯಾನ ಮುಂದೂಡಿಕೆ

Update: 2024-10-23 15:34 GMT

PC : polioeradication.org

ಬರ್ಲಿನ್ : ಇಸ್ರೇಲ್‍ನ ಬಾಂಬ್ ದಾಳಿ, ಸಾಮೂಹಿಕ ಸ್ಥಳಾಂತರ ಹಾಗೂ ಪ್ರವೇಶಕ್ಕೆ ಮುಕ್ತ ಅವಕಾಶದ ಕೊರತೆಯ ಕಾರಣದಿಂದಾಗಿ ಉತ್ತರ ಗಾಝಾದಲ್ಲಿನ ಪೋಲಿಯೊ ಲಸಿಕೆ ಅಭಿಯಾನವನ್ನು ಮುಂದೂಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.

ಬುಧವಾರ ಆರಂಭವಾಗಬೇಕಿದ್ದು ಅಂತಿಮ ಹಂತದಲ್ಲಿ ಸುಮಾರು ಒಂದು ವರ್ಷದಿಂದ ಮುತ್ತಿಗೆಗೆ ಒಳಗಾಗಿರುವ ಫೆಲೆಸ್ತೀನ್ ಪ್ರದೇಶದ 1,29,000ಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ನಾಗರಿಕ ಮೂಲಸೌಕರ್ಯದ ಮೇಲೆ ಮುಂದುವರಿದ ದಾಳಿ ಸೇರಿದಂತೆ ಪ್ರಸ್ತುತ ಪರಿಸ್ಥಿತಿಗಳು ಉತ್ತರ ಗಾಝಾದಲ್ಲಿನ ಜನರ ಸುರಕ್ಷತೆ ಮತ್ತು ಚಲನೆಗೆ ಅಪಾಯ ಉಂಟು ಮಾಡುವುದನ್ನು ಮುಂದುವರಿಸಿದೆ. ಇದರಿಂದಾಗಿ ಕುಟುಂಬಗಳು ಲಸಿಕೆಗಾಗಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಮತ್ತು ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಗಾಝಾದಲ್ಲಿ ಕದನ ವಿರಾಮದ ಬೇಡಿಕೆಯನ್ನು ಪುನರುಚ್ಚರಿಸಿದೆ.

ಗಾಝಾದಲ್ಲಿನ ಮಗುವೊಂದು ಟೈಪ್ 2 ಪೋಲಿಯೋದಿಂದ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದ ಬಳಿಕ ಸೆಪ್ಟಂಬರ್ 1ರಂದು ಗಾಝಾ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮಕ್ಕಳಿಗೆ ಎರಡನೇ ಡೋಸ್‍ನಲ್ಲಿನ ವಿಳಂಬವು ಪ್ರಸರಣವನ್ನು ನಿಲ್ಲಿಸುವ ಪ್ರಯತ್ನಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಇದು ಗಾಝಾ ಪಟ್ಟಿ ಮತ್ತು ನೆರೆಹೊರೆಯ ದೇಶಗಳಲ್ಲಿ ಪೋಲಿಯೊ ಮತ್ತಷ್ಟು ಹರಡಲು ಕಾರಣವಾಗಬಹುದು ಮತ್ತು ಇನ್ನಷ್ಟು ಮಕ್ಕಳು ಪಾಶ್ರ್ವವಾಯುವಿಗೆ ತುತ್ತಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News