ಗಾಝಾದಿಂದ ತೆರಳದಿದ್ದರೆ ‘ಉಗ್ರರೆಂದು’ ಪರಿಗಣಿಸಬಹುದು: ಗಾಝಾ ನಿವಾಸಿಗಳಿಗೆ ಇಸ್ರೇಲ್ ತುರ್ತು ಎಚ್ಚರಿಕೆ
ಟೆಲ್ಅವೀವ್: ಉತ್ತರ ಗಾಝಾದಿಂದ ದಕ್ಷಿಣದತ್ತ ಸ್ಥಳಾಂತರಗೊಳ್ಳುವಂತೆ ಮತ್ತೆ ಗಾಝಾದ ನಿವಾಸಿಗಳಿಗೆ ತುರ್ತು ಸಂದೇಶ ನೀಡಿರುವ ಇಸ್ರೇಲ್, ಇಲ್ಲದಿದ್ದರೆ ಅವರನ್ನು ‘ಭಯೋತ್ಪಾದಕ ಸಂಘಟನೆಯೊಂದಿಗೆ ಸಹಾನುಭೂತಿ ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದೆ.
ಇಸ್ರೇಲ್ ಭದ್ರತಾ ಪಡೆಗಳ ಹೆಸರು ಮತ್ತು ಲೋಗೊ ಹೊಂದಿರುವ ಕರಪತ್ರಗಳನ್ನು ಗಾಝಾ ಪಟ್ಟಿಯಾದ್ಯಂತ ವಿತರಿಸುವ ಮೂಲಕ ಮತ್ತು ಮೊಬೈಲ್ಗೆ ಸಂದೇಶ ರವಾನಿಸುವ ಮೂಲಕ ಎಚ್ಚರಿಕೆ ರವಾನಿಸಲಾಗಿದೆ ಎಂದು ‘ರಾಯ್ಟರ್ಸ್’ ಸುದ್ಧಿಸಂಸ್ಥೆ ವರದಿ ಮಾಡಿದೆ.
‘ಗಾಝಾದ ನಿವಾಸಿಗಳಿಗೆ ತುರ್ತು ಎಚ್ಚರಿಕೆ. ಉತ್ತರ ಗಾಝಾದಲ್ಲಿ ನಿಮ್ಮ ಉಪಸ್ಥಿತಿಯು ನಿಮ್ಮ ಬದುಕನ್ನು ಅಪಾಯಕ್ಕೆ ಗುರಿಯಾಗಿಸಬಹುದು. ಉತ್ತರ ಗಾಝಾವನ್ನು ತೊರೆಯದಿರಲು ಆಯ್ಕೆ ಮಾಡುವವರನ್ನು ಭಯೋತ್ಪಾದಕ ಸಂಘಟನೆಯ ಸಹಚರ ಎಂದು ಗುರುತಿಸಲಾಗುವುದು’ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಸ್ಥಳಾಂತರಗೊಳ್ಳದವರನ್ನು ಭಯೋತ್ಪಾದಕ ಸಂಘಟನೆಯ ಸದಸ್ಯನೆಂದು ಪರಿಗಣಿಸುವ ಉದ್ದೇಶವಿಲ್ಲ. ತನ್ನ ಕಾರ್ಯಾಚರಣೆ ನಾಗರಿಕರನ್ನು ಗುರಿಯಾಗಿಸಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ದಿನದ ಮಹತ್ವದ ಬೆಳವಣಿಗೆಗಳು:
►ಮಧ್ಯಪ್ರಾಚ್ಯ ಸಂಘರ್ಷ ಉಲ್ಬಣಿಸಿದರೆ ಮಧ್ಯಪ್ರವೇಶಿಸಲು ಹಿಂಜರಿಯುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ರವಿವಾರ ಹೇಳಿದ್ದಾರೆ. ಈ ದುರದೃಷ್ಟಕರ ಪರಿಸ್ಥಿತಿಯ ಲಾಭ ಪಡೆಯಲು ಅಥವಾ ಸಂಘರ್ಷವನ್ನು ವಿಸ್ತರಿಸಲು ಯಾವುದೇ ದೇಶ ಅಥವಾ ಗುಂಪು ಬಯಸಿದರೆ ಅವರಿಗೆ ನಾವು ನೀಡುವ ಸಲಹೆ ‘ಖಂಡಿತಾ ಬೇಡ’ ಎಂಬುದಾಗಿದೆ. ಆಗ ನಾವು ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದವರು ಎಚ್ಚರಿಕೆ ನೀಡಿದ್ದಾರೆ.
►ಇಸ್ರೇಲ್-ಹಮಾಸ್ ಸಂಘರ್ಷವನ್ನು ಪರಿಹರಿಸಲು ಬಲಪ್ರಯೋಗ ಮಾರ್ಗವಲ್ಲ ಎಂದು ಚೀನಾ ನಂಬುತ್ತದೆ ಮತ್ತು ಹಿಂಸಾಚಾರಕ್ಕೆ ಹಿಂಸಾಚಾರವೇ ಮದ್ದು ಎಂಬ ಭಾವನೆ ಸರಿಯಲ್ಲ. ಸಂಘರ್ಷ ಕೊನೆಗೊಂಡು ತಕ್ಷಣ ಕದನ ವಿರಾಮ ಜಾರಿಯಾಗಬೇಕು ಎಂದು ಮಧ್ಯಪ್ರಾಚ್ಯ ದೇಶಗಳಿಗೆ ಚೀನಾದ ರಾಯಭಾರಿ ಝಾಯಿ ಝುನ್ ಹೇಳಿದ್ದಾರೆ.
►ಹಿಜ್ಬುಲ್ಲಾ ಗುಂಪು ಇಸ್ರೇಲ್ ಜತೆ ಯುದ್ಧಕ್ಕೆ ಬಂದರೆ ಲೆಬನಾನ್ ಮೇಲೆ ಊಹಿಸಲಾಗದ ಪರಿಣಾಮ ಉಂಟಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಲೆಬನಾನ್ ಅನ್ನೂ ಈ ಯುದ್ಧಕ್ಕೆ ಎಳೆತರಲು ಹಿಜ್ಬುಲ್ಲಾ ಪ್ರಯತ್ನಿಸುತ್ತಿದೆ ಎಂದವರು ಆರೋಪಿಸಿದ್ದಾರೆ.
►ಹಮಾಸ್ ನ ಮೇಲೆ ಇಸ್ರೇಲ್ ನ ಯುದ್ಧದ ಪರಿಣಾಮ ಮಧ್ಯಪ್ರಾಚ್ಯದ ಪರಿಸ್ಥಿತಿ ನಿಯಂತ್ರಣ ಮೀರುವ ಸಾಧ್ಯತೆಯಿದೆ ಎಂದು ಇರಾನ್ನ ವಿದೇಶಾಂಗ ಸಚಿವರು ರವಿವಾರ ಅಮೆರಿಕ ಮತ್ತು ಇಸ್ರೇಲ್ಗೆ ಎಚ್ಚರಿಕೆ ನೀಡಿದ್ದಾರೆ.