ಪೂರ್ವ ಏಶ್ಯಾದ್ಯಂತ ದಾಖಲೆಯ ಉಷ್ಣಹವೆ, 24 ಕೋಟಿ ಮಕ್ಕಳಿಗೆ ಅಪಾಯದ ಸಾಧ್ಯತೆ: ವಿಶ್ವಸಂಸ್ಥೆ ಎಚ್ಚರಿಕೆ

Update: 2024-04-11 16:20 GMT

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಪೂರ್ವ ಏಶ್ಯಾ ಮತ್ತು ಪೆಸಿಫಿಕ್‍ನಾದ್ಯಂತ ಬೇಸಿಗೆಯ ದಾಖಲೆಯ ಶಾಖದ ಅಲೆಯ ಮುನ್ಸೂಚನೆಯನ್ನು ವಿಶ್ವಸಂಸ್ಥೆ ಮಕ್ಕಳ ನಿಧಿ(ಯುನಿಸೆಫ್) ನೀಡಿದ್ದು ಇದು 243 ದಶಲಕ್ಷ(ಸುಮಾರು 24.3 ಕೋಟಿ) ಮಕ್ಕಳ ಜೀವವನ್ನು ಅಪಾಯಕ್ಕೆ ಒಡ್ಡಲಿದೆ ಎಂದು ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ದಾಖಲಾದ 40 ಡಿಗ್ರಿ ಸೆಲ್ಶಿಯಸ್ ತಾಪಮಾನ, ಮುಂದಿನ ತಿಂಗಳಲ್ಲಿ ಶಾಖದ ಅಲೆಗಳ ಹೆಚ್ಚುತ್ತಿರುವ ತೀವ್ರತೆ ಮತ್ತು ಆವರ್ತನದ ಎಚ್ಚರಿಕೆಯ ಹಿನ್ನೆಲೆಯಲ್ಲಿ ` ಮಕ್ಕಳ ಆರೋಗ್ಯವನ್ನು ರಕ್ಷಿಸಲು ಪೋಷಕರು ಮತ್ತು ಆರೈಕೆದಾರರು ಹೆಚ್ಚಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕುʼ ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಸುಮಾರು 243 ದಶಲಕ್ಷ ಮಕ್ಕಳು ಬಿಸಿಯಾದ ಮತ್ತು ದೀರ್ಘಕಾಲದ ಶಾಖದ ಅಲೆಗಳಿಗೆ ಒಡ್ಡಿಕೊಳ್ಳುತ್ತಿದ್ದು ಇದು ಶಾಖ ಸಂಬಂಧಿತ ಅನಾರೋಗ್ಯ ಮತ್ತು ಸಾವಿನ ಅಪಾಯವನ್ನು ತಂದೊಡ್ಡಿದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವಲ್ಲಿ ವಯಸ್ಕರಿಗಿಂತ ಮಕ್ಕಳು ಹೆಚ್ಚು ದುರ್ಬಲರಾಗಿದ್ದಾರೆ ಮತ್ತು ಹೆಚ್ಚಿನ ಶಾಖವು ಮಕ್ಕಳಿಗೆ ಮಾರಣಾಂತಿಕ ಬೆದರಿಕೆಯಾಗಲಿದೆ' ಎಂದು ಯುನಿಸೆಫ್‍ನ ಪೂರ್ವ ಏಶ್ಯಾ ಮತ್ತು ಪೆಸಿಫಿಕ್ ಪ್ರಾದೇಶಿಕ ಕಚೇರಿ ಮುಖ್ಯಸ್ಥೆ ಡೆಬೋರಾ ಕೊಮಿನಿ ಹೇಳಿದ್ದಾರೆ.

ಈ ಬೇಸಿಗೆಯಲ್ಲಿ ತೀವ್ರಗೊಳ್ಳುವ ಶಾಖದ ಅಲೆಗಳು ಹಾಗೂ ಇತರ ಹವಾಮಾನ ಆಘಾತಗಳಿಂದ ಮಕ್ಕಳನ್ನು ಮತ್ತು ದುರ್ಬಲ ಸಮುದಾಯವನ್ನು ರಕ್ಷಿಸಲು ನಾವು ಕಟ್ಟೆಚ್ಚರ ವಹಿಸಬೇಕಿದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮಕ್ಕಳಿಗೆ ಕಡಿಮೆ ಸಾಮರ್ಥ್ಯವಿರುವುದರಿಂದ ಶಾಖದ ಅಲೆಗಳು ವಯಸ್ಕರಿಗಿಂತ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ದೀರ್ಘಕಾಲದ ಉಸಿರಾಟದ ಸಮಸ್ಯೆಗಳು, ಅಸ್ತಮಾ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಸೇರಿದಂತೆ ಶಾಖದ ಅಲೆಗಳಿಗೆ ಸಂಬಂಧಿಸಿದ ಮರಣ ಮತ್ತು ಅನಾರೋಗ್ಯದ ಹೆಚ್ಚಿನ ಅಪಾಯವನ್ನು ಚಿಕ್ಕಮಕ್ಕಳು ಹೊಂದಿರುತ್ತಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ತೀವ್ರವಾದ ಶಾಖಕ್ಕೆ ದೀರ್ಘಕಾಲದ ವರೆಗೆ ಒಡ್ಡಿಕೊಳ್ಳುವುದರಿಂದ ಮಕ್ಕಳ ಏಕಾಗ್ರತೆ ಮತ್ತು ಕಲಿಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ, ಅವರ ಶಿಕ್ಷಣವನ್ನು ಅಪಾಯಕ್ಕೆ ಒಡ್ಡುತ್ತದೆ. ವಿಪರೀತ ಶಾಖಮಾನವು ಗರ್ಭಿಣಿಯರು ಅಕಾಲಿಕ ಹೆರಿಗೆ ಅಥವಾ ಮೃತ ಶಿಶುಗಳಿಗೆ ಜನ್ಮನೀಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಗರ್ಭಾವಸ್ಥೆಯ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಹೆಚ್ಚಿಸುತ್ತದೆ ಎಂದು ಯುನಿಸೆಫ್ ಹೇಳಿದೆ. ಪೂರ್ವ ಏಶ್ಯಾ ಮತ್ತು ಪೆಸಿಫಿಕ್‍ನಲ್ಲಿ ಹೆಚ್ಚಿನ ಆದ್ರತೆಯ ಮಟ್ಟದ ಶಾಖದ ಅಲೆಗಳು ಹೆಚ್ಚು ಮಾರಣಾಂತಿಕವಾಗಿರುತ್ತದೆ. ಇದು ದೇಹವನ್ನು ನೈಸರ್ಗಿಕವಾಗಿ ತಂಪಾಗಿಸುವ ಕ್ಷಮತೆ, ಕಾರ್ಯವಿಧಾನಗಳಿಗೆ ಅಡ್ಡಿಯಾಗಿದೆ. ಏರುತ್ತಿರುವ ಶಾಖದ ಅಲೆಗಳಿಂದ ಮಕ್ಕಳಿಗೆ ಎದುರಾಗುವ ಸಮಸ್ಯೆಗಳನ್ನು ಗಮನಿಸಿ ಫಿಲಿಪ್ಪೀನ್ಸ್ ನಲ್ಲಿ ಮಕ್ಕಳಿಗೆ ಆನ್‍ಲೈನ್ ತರಗತಿಯನ್ನು ಆರಂಭಿಸಲಾಗಿದೆ. ದೀರ್ಘಕಾಲದಿಂದ ಸೂರ್ಯಕಿರಣಗಳಿಗೆ ಒಡ್ಡಿಕೊಳ್ಳದಂತೆ ಮತ್ತು ಉಷ್ಣ ಅಲೆಯ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಆಗ್ನೇಯ ಏಶ್ಯಾದ್ಯಂತ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

2050ರ ವೇಳೆಗೆ ಪ್ರಪಂಚದ ಎಲ್ಲಾ 2.02 ಶತಕೋಟಿ ಮಕ್ಕಳು ಹೆಚ್ಚಿನ ಶಾಖದ ಆವರ್ತನಕ್ಕೆ ಒಡ್ಡಿಕೊಳ್ಳುತ್ತಾರೆ ಎಂದು ಯುನಿಸೆಫ್ ಅಂದಾಜಿಸಿದೆ. ಪೂರ್ವ ಏಶ್ಯಾದ ವಿಸ್ತಾರವಾದ ನಗರ ಕೇಂದ್ರಗಳಾದ್ಯಂತ ಕಟ್ಟಡಗಳು, ರಸ್ತೆಗಳು ಮತ್ತು ವಾಹನಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಇರುವುದಕ್ಕಿಂತ ತಾಪಮಾನ ಹೆಚ್ಚಿನ ಮಟ್ಟದಲ್ಲಿರುತ್ತದೆ.

ಅತ್ಯಂತ ವಿಪತ್ತು ಪೀಡಿತ ಪ್ರದೇಶ

ಯುನಿಸೆಫ್‍ನ ಇತ್ತೀಚಿನ ವಿಶ್ಲೇಷಣೆಯು ಏಶ್ಯಾ ಪೆಸಿಫಿಕ್ ಅನ್ನು ವಿಶ್ವದ ಅತ್ಯಂತ ವಿಪತ್ತುಪೀಡಿತ ಪ್ರದೇಶವೆಂದು ಗುರುತಿಸಿದೆ. ಇದು ಸ್ಥಳಾಂತರ, ಶಾಲೆ ಮುಚ್ಚುವಿಕೆ, ನೀರಿನ ಕೊರತೆ ಮತ್ತು ಮಕ್ಕಳ ಆರೋಗ್ಯದ ಅಪಾಯಕ್ಕೆ ಕಾರಣವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News