ಪಾಕ್ ಚುನಾವಣೆ ಫಲಿತಾಂಶ ಇನ್ನೂ ಅಸ್ಪಷ್ಟ ; ಸರಕಾರ ರಚಿಸುವುದಾಗಿ ಇಮ್ರಾನ್, ಷರೀಫ್ ಹೇಳಿಕೆ

Update: 2024-02-10 17:15 GMT

ನವಾಝ್ ಷರೀಫ್ | Photo: PTI 

ಇಸ್ಲಮಾಬಾದ್ : ಪಾಕಿಸ್ತಾನ ಚುನಾವಣೆಯ ಮತ ಎಣಿಕೆ ಗುರುವಾರ ಸಂಜೆ ಆರಂಭಗೊಂಡಿದ್ದು ಶನಿವಾರ ರಾತ್ರಿಯವರೆಗೂ ಸಂಪೂರ್ಣ ಫಲಿತಾಂಶ ಪ್ರಕಟಗೊಂಡಿಲ್ಲ. ಈ ಮಧ್ಯೆ, ಮಾಜಿ ಪ್ರಧಾನಿಗಳಾದ ಇಮ್ರಾನ್ ಖಾನ್ ಹಾಗೂ ನವಾಝ್ ಷರೀಫ್ ತಮ್ಮ ಪಕ್ಷವೇ ಸರಕಾರ ರಚಿಸುವುದಾಗಿ ಪ್ರತಿಪಾದಿಸಿದ್ದಾರೆ.

ಕೃತಕ ಬುದ್ಧಿಮತ್ತೆ(ಎಐ) ಮೂಲಕ ರಚಿಸಲಾದ ಭಾಷಣದಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿರುವ ಇಮ್ರಾನ್ ಖಾನ್, ಪಕ್ಷ ಗೆದ್ದಿದ್ದು ವಿಜಯೋತ್ಸವ ಆಚರಿಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಜತೆಗೆ, ಶನಿವಾರ ಮಧ್ಯರಾತ್ರಿಯ ಮುನ್ನ ಎಲ್ಲಾ ಫಲಿತಾಂಶಗಳನ್ನೂ ಪ್ರಕಟಿಸದಿದ್ದರೆ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪಿಟಿಐ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

265 ಸ್ಥಾನಗಳಲ್ಲಿ ಶುಕ್ರವಾರ ಸಂಜೆಯವರೆಗೆ 253 ಸ್ಥಾನಗಳ ತಾತ್ಕಾಲಿಕ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು 100 ಸ್ಥಾನ, ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ 71, ಬಿಲಾವಲ್ ಭುಟ್ಟೋ ಅವರ ಪಿಪಿಪಿ 54, ಎಂಕ್ಯೂಎಂ ಪಕ್ಷ 17 ಸ್ಥಾನ ಪಡೆದಿದೆ. ಒಟ್ಟು 266 ಸ್ಥಾನಗಳಲ್ಲಿ ಬಹುಮತ ಸಾಧಿಸಲು 134 ಸ್ಥಾನಗಳಲ್ಲಿ ಗೆಲುವು ಅಗತ್ಯವಿದೆ. (ಒಂದು ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ).

ಸಂಸತ್‍ನ ಕೆಳಮನೆಯಲ್ಲಿ 266 ಸ್ಥಾನಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚುವರಿ 60 ಕ್ಷೇತ್ರಗಳು ಮಹಿಳೆಯರಿಗೆ ಹಾಗೂ 10 ಸ್ಥಾನಗಳು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮೀಸಲಾಗಿದೆ. ನೇರ ಚುನಾವಣೆಯಲ್ಲಿ ಪಕ್ಷಗಳು ಗೆಲ್ಲುವ ಸ್ಥಾನಗಳ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಕ್ಷೇತ್ರಗಳನ್ನು ಆಯಾ ಪಕ್ಷಗಳಿಗೆ ನಿಗದಿ ಪಡಿಸಲಾಗುತ್ತದೆ.

ಹೀಗೆ ಒಟ್ಟು 336 ಸ್ಥಾನಗಳಲ್ಲಿ ಸರಳ ಬಹುಮತಕ್ಕೆ 169 ಸ್ಥಾನಗಳ ಅಗತ್ಯವಿದೆ. ಏಕೈಕ ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿರುವುದರಿಂದ ತಮ್ಮ ಪಕ್ಷಕ್ಕೆ ಸರಕಾರ ರಚಿಸಲು ಅವಕಾಶ ನೀಡಬೇಕೆಂದು ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ. ಈ ಮಧ್ಯೆ, ಬಿಲಾವಲ್ ಭುಟ್ಟೋ ಅವರ ಪಿಪಿಪಿ ಪಕ್ಷದ ಬೆಂಬಲ ಪಡೆದು ಸಮ್ಮಿಶ್ರ ಸರಕಾರ ರಚಿಸುವುದಾಗಿ ನವಾಝ್ ಷರೀಫ್ ಪಟ್ಟು ಹಿಡಿದಿದ್ದಾರೆ.

ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಿಗೂ ಏಕಕಾಲಕ್ಕೆ ಚುನಾವಣೆ ನಡೆದಿದ್ದು ಪಂಜಾಬ್ ಪ್ರಾಂತದಲ್ಲಿ ನವಾಝ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಇತರರಿಗಿಂತ ಮುಂದಿದೆ. ವಾಯವ್ಯದ ಖೈಬರ್ ಪಖ್ತೂಂಕ್ವಾದಲ್ಲಿ ಪಿಟಿಐ ಬೆಂಬಲಿತ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ. ದಕ್ಷಿಣದ ಸಿಂಧ್ ಪ್ರಾಂತದಲ್ಲಿ ಪಿಪಿಪಿ ಬಹುಮತ ಸಾಧಿಸಿದ್ದರೆ ನೈಋತ್ಯದ ಬಲೂಚಿಸ್ತಾನ ಪ್ರಾಂತದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕಿಲ್ಲ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News