ಪಾಕ್ ಚುನಾವಣೆ: ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರರು 95 ಕ್ಷೇತ್ರಗಳಲ್ಲಿ ಗೆಲುವು
ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಅದರೆ 266 ಸದಸ್ಯಬಲದ ಸದನದಲ್ಲಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್ ಐ ಇನ್ಸಾಫ್ (ಪಿಟಿಐ) ಬೆಂಬಲಿತ ಪಕ್ಷೇತರರು 95 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ಅಚ್ಚರಿಯ ವಿಚಾರವೆಂದರೆ ಗಡೀಪಾರು ಶಿಕ್ಷೆಗೆ ಒಳಗಾಗಿದ್ದ ಮಾಜಿ ಪ್ರಧಾನಿ ನವಾಝ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಕೇವಲ 64 ಸ್ಥಾನಗಳನ್ನು ಗೆದ್ದಿದ್ದರೂ, ಜಯ ತಮ್ಮದೇ ಎಂದು ಹೇಳಿಕೊಂಡಿದೆ. ವ್ಯಾಪಕ ಪ್ರಮಾಣದ ರಿಗ್ಗಿಂಗ್ ಮತ್ತು ಸೇನೆ ಹಾಗೂ ಆಡಳಿತಾತ್ಮಕ ಶಕ್ತಿಯ ದುರ್ಬಳಕೆ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಪಿಎಂಎಲ್-ಎನ್ ಏಕೈಕ ದೊಡ್ಡ ಪಕ್ಷ ಎಂದು ಹೇಳಿಕೊಂಡಿದ್ದರೂ, ಸರ್ಕಾರ ರಚನೆ ಮಾಡುವ ಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಬಿಲ್ವಾಲಿ ಭುಟ್ಟೊ- ಜರ್ದಾರಿಯವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 50 ಸ್ಥಾನಗಳಲ್ಲಿ ಗೆದ್ದಿದ್ದು, ಸುಮಾರು 40 ಸ್ಥಾನಗಳ ಫಲಿತಾಂಶ ಬಾಕಿ ಇದೆ.
ಷರೀಫ್ ಅವರು ಇಮ್ರಾನ್ ಬೆಂಬಲಿತ ಪಕ್ಷೇತರರನ್ನು ತಮ್ಮ ಜತೆ ಇರುವಂತೆ ಆಹ್ವಾನಿಸಿದ್ದು, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಆಸೀಫ್ ಅಲಿ ಜರ್ದಾರಿ ಮತ್ತು ಇತರ ಸಣ್ಣ ಪಕ್ಷಗಳನ್ನು ತೆಕ್ಕೆಗೆ ಪಡೆಯುವಂತೆ ತಮ್ಮ ಸಹೋದರ ಶಹಬಾಝ್ ಶರೀಫ್ ಅವರಿಗೆ ಸೂಚನೆ ನೀಡಿದ್ದಾರೆ.
"ಸರ್ಕಾರ ರಚಿಸಲು ಎಲ್ಲ ಪಕ್ಷಗಲು ಒಂದಾಗಬೇಕು" ಎಂದು ಮೂರು ಬಾರಿ ದೇಶದ ಪ್ರಧಾನಿಯಾಗಿದ್ದ ಅವರು ಕರೆ ನೀಡಿದ್ದಾರೆ. ತಮ್ಮ ಪಕ್ಷ ಬಹುಮತ ಸಾಧಿಸಿದ್ದರೆ ಅದು ಆದರ್ಶವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ಕೆಲ ಪಕ್ಷೇತರರ ಗುಂಪಿಗಿಂತಲೂ ಕಡಿಮೆ ಸ್ಥಾನಗಳನ್ನು ಗೆದ್ದಿರುವ ಷರೀಫ್, ಸರ್ಕಾರ ರಚನೆ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ಪಿಟಿಐ ವಾಗ್ದಾಳಿ ನಡೆಸಿದೆ. ಪಿಎಂಎಲ್-ಎನ್ ಗೆದ್ದಿರುವುದಾಗಿ ತೋರಿಸುತ್ತಿರುವ ಸ್ಥಾನಗಳು ಕೂಡಾ ಕದ್ದ ಹಾಗೂ ರಿಗ್ಗಿಂಗ್ ನಿಂದ ಗೆದ್ದ ಕ್ಷೇತ್ರಗಳು ಎಂದು ಅಧಿಕೃತ ಎಕ್ಸ್ ಹ್ಯಾಂಡಲ್ ನಿಂದ ಪೋಸ್ಟ್ ಮಾಡಲಾಗಿದೆ.