ಪಾಕಿಸ್ತಾನಕ್ಕೆ ಅಂತಿಮ ಕಂತಿನ ಸಾಲ ಒದಗಿಸಲು ಸಿಬ್ಬಂದಿ ಮಟ್ಟದ ಒಪ್ಪಂದ: ಐಎಂಎಫ್

Update: 2024-03-20 17:21 GMT

Photo: PTI

ನ್ಯೂಯಾರ್ಕ್ : ಪಾಕಿಸ್ತಾನಕ್ಕೆ ಅಂತಿಮ ಕಂತಿನ ಸಾಲ ಒದಗಿಸುವ ನಿಟ್ಟಿನಲ್ಲಿ ಬುಧವಾರ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಬರಲಾಗಿದೆ ಎಂದು ಅಂತರ್‍ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ 3 ಶತಕೋಟಿ ಡಾಲರ್ ಮೊತ್ತದ ಸಾಲದ ಪ್ಯಾಕೇಜ್ ಒದಗಿಸಲು ಕಳೆದ ಬೇಸಿಗೆಯಲ್ಲಿ ಐಎಂಎಫ್ ಸಮ್ಮತಿಸಿದ್ದರಿಂದ ಪಾಕಿಸ್ತಾನ `ಸರಕಾರದ ಸಾಲ' ಮರು ಪಾವತಿಸದೆ ಡಿಫಾಲ್ಟರ್ ಆಗುವ ಅವಮಾನದಿಂದ ಪಾರಾಗಿತ್ತು. ಈ ಸಾಲದ ಅಂತಿಮ ಕಂತಿನಲ್ಲಿ 1.1 ಶತಕೋಟಿ ಡಾಲರ್ ಸಾಲ ದೊರಕಲಿದ್ದು ಇದನ್ನು ಬಿಡುಗಡೆ ಮಾಡುವ ಬಗ್ಗೆ ಐಎಂಎಫ್ ಮತ್ತು ಪಾಕಿಸ್ತಾನ ಸರಕಾರದ ನಡುವೆ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಬರಲಾಗಿದೆ ಎಂದು ಐಎಂಎಫ್ ಮೂಲಗಳನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಹಾಗೂ ಉಸ್ತುವಾರಿ ಸರಕಾರ ಇತ್ತೀಚಿನ ತಿಂಗಳಲ್ಲಿ ಬಲವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದನ್ನು , ಜತೆಗೆ, ಪಾಕಿಸ್ತಾನವನ್ನು ಸ್ಥಿರೀಕರಣದಿಂದ ಬಲವಾದ ಮತ್ತು ಸುಸ್ಥಿರ ಚೇತರಿಕೆಯತ್ತ ಸರಿಸಲು ನಡೆಯುತ್ತಿರುವ ನೀತಿ ಮತ್ತು ಸುಧಾರಣಾ ಪ್ರಯತ್ನಗಳಿಗಾಗಿ ಹೊಸ ಸರಕಾರದ ಉದ್ದೇಶಗಳನ್ನು ಒಪ್ಪಂದ ಪರಿಗಣಿಸಿದೆ. ಹೊಸ ಸಚಿವ ಸಂಪುಟ ರಚನೆಯ ನಂತರ ಎರಡನೇ ಪರಿಶೀಲನಾ ಕಾರ್ಯಾಚರಣೆಯನ್ನು ಗಮನಿಸಿದರೆ, ಎಪ್ರಿಲ್ ಅಂತ್ಯದಲ್ಲಿ ಐಎಂಎಫ್ ಆಡಳಿತ ಮಂಡಳಿ ಈ ಪರಿಶೀಲನೆಯನ್ನು ಪರಿಗಣಿಸುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ.

ಪ್ರಥಮ ಪರಿಶೀಲನೆ ನಡೆದಂದಿನಿಂದ ಪಾಕಿಸ್ತಾನದ ಆರ್ಥಿಕ ಮತ್ತು ವಿತ್ತೀಯ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಣೆಗೊಂಡಿದೆ ಎಂದು ಪಾಕಿಸ್ತಾನದಲ್ಲಿ ಐಎಂಎಫ್ ನಿಯೋಗದ ಮುಖ್ಯಸ್ಥ ನಥಾನ್ ಪೋರ್ಟರ್ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News