ಪಾಕಿಸ್ತಾನ: ಪೊಲೀಸ್ ಠಾಣೆಯ ಮೇಲೆ ಉಗ್ರರ ದಾಳಿ; 10 ಅಧಿಕಾರಿಗಳ ಮೃತ್ಯು
ಕರಾಚಿ: ಉತ್ತರ ಪಾಕಿಸ್ತಾನದಲ್ಲಿ ಖೈಬರ್ ಪಖ್ತೂಂಕ್ವಾ ಪೊಲೀಸ್ ಠಾಣೆಯ ಮೇಲೆ ಸೋಮವಾರ ಬೆಳಿಗ್ಗೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಟ 10 ಅಧಿಕಾರಿಗಳು ಮೃತಪಟ್ಟಿರುವುದಾಗಿ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ಅಭ್ಯರ್ಥಿಗಳ ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ ಪ್ರಕರಣವೂ ಹೆಚ್ಚುತ್ತಿದೆ. `ಖೈಬರ್ ಪಖ್ತೂಂಕ್ವಾದ ಡೇರಾ ಇಸ್ಮಾಯಿಲ್‍ಖಾನ್ ಜಿಲ್ಲೆಯ ಚೌಧ್ವಾನ್ ಪೊಲೀಸ್ ಠಾಣೆಯ ಮೇಲೆ ಸೋಮವಾರ ಬೆಳಿಗ್ಗೆ 30ಕ್ಕೂ ಅಧಿಕ ಉಗ್ರರು ಠಾಣೆಯ ಮೂರು ದಿಕ್ಕಿನಿಂದ ದಾಳಿ ನಡೆಸಿದ್ದಾರೆ. ಏಕಾಏಕಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ 10 ಅಧಿಕಾರಿಗಳು ಸಾವನ್ನಪ್ಪಿದ್ದು ಇತರ 4 ಸಿಬಂದಿ ಗಾಯಗೊಂಡಿದ್ದಾರೆ. ಆರಂಭದಲ್ಲಿ ಉಗ್ರರು ಠಾಣೆಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದ್ದು ಸುಮಾರು 3 ಗಂಟೆ ಗುಂಡಿನ ಚಕಮಕಿಯ ನಂತರ ಉಗ್ರರು ಪರಾರಿಯಾಗಿದ್ದಾರೆ ಎಂದು ಖೈಬರ್ ಪಖ್ತೂಂಕ್ವಾ ಪ್ರಾಂತದ ಪೊಲೀಸ್ ಮುಖ್ಯಸ್ಥ ಅಖ್ತರ್ ಹಯಾತ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಕಳೆದ ವಾರ ನೈಋತ್ಯ ಪಾಕಿಸ್ತಾನದ ಗಡಿಭಾಗದ ಬಳಿಯಿರುವ ಸೇನಾ ನೆಲೆಯ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ಗುಂಪು) ನಡೆಸಿದ್ದ ದಾಳಿಯಲ್ಲಿ 4 ಭದ್ರತಾ ಸಿಬಂದಿ ಹಾಗೂ ಇಬ್ಬರು ನಾಗರಿಕರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಕನಿಷ್ಟ 24 ಉಗ್ರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.