ಪುತ್ರಿಯನ್ನು ಪ್ರಥಮ ಮಹಿಳೆಯೆಂದು ಹೆಸರಿಸಿದ ಪಾಕಿಸ್ತಾನ ಅಧ್ಯಕ್ಷ ಝರ್ದಾರಿ

Update: 2024-03-11 16:40 GMT

Photo: instagram /@aseefabz

ಇಸ್ಲಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ತನ್ನ ಪುತ್ರಿ ಅಸೀಫಾ ಭುಟ್ಟೋರನ್ನು ದೇಶದ ಪ್ರಥಮ ಮಹಿಳೆಯೆಂದು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎ ಆರ್ ವೈ ನ್ಯೂಸ್ ವರದಿ ಮಾಡಿದೆ.

ಸಾಮಾನ್ಯವಾಗಿ ಈ ಸ್ಥಾನಮಾನ ಅಧ್ಯಕ್ಷರ ಪತ್ನಿಗೆ ಸಲ್ಲುತ್ತದೆ. ಆದರೆ ಝರ್ದಾರಿಯವರ ಪತ್ನಿ, ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ 2007ರಲ್ಲಿ ಹತರಾಗಿರುವುದರಿಂದ ಇದೇ ಪ್ರಥಮ ಬಾರಿಗೆ ಪಾಕಿಸ್ತಾನದ ಅಧ್ಯಕ್ಷರ ಪುತ್ರಿ ಈ ಗೌರವವಕ್ಕೆ ಪಾತ್ರರಾಗಲಿದ್ದಾರೆ.

ಈ ಕುರಿತ ಅಧಿಕೃತ ಘೋಷಣೆಯ ಬಳಿಕ ಆಸಿಫಾ ಭುಟ್ಟೋಗೆ ಪ್ರಥಮ ಮಹಿಳೆಗೆ ಸೂಕ್ತವಾದ ಶಿಷ್ಟಾಚಾರ ಮತ್ತು ಸವಲತ್ತುಗಳು ದೊರಕಲಿವೆ. ರವಿವಾರ ಪಾಕಿಸ್ತಾನ್ ಪೀಪಲ್ಸ್ ಪಕ್ಷ(ಪಿಪಿಪಿ)ದ ಸಹ ಅಧ್ಯಕ್ಷ ಆಸಿಫ್ ಝರ್ದಾರಿ ದೇಶದ 14ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರವಿವಾರ ಅಧ್ಯಕ್ಷ ಹುದ್ದೆಗೆ ನಡೆದ ಮತದಾನದಲ್ಲಿ ಝರ್ದಾರಿ 411 ಇಲೆಕ್ಟೋರಲ್ ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಪಿಕೆಎಂಎಪಿ ಪಕ್ಷದ ಮುಖ್ಯಸ್ಥ ಮೆಹ್ಮೂದ್ ಖಾನ್ 181 ಮತಗಳನ್ನು ಪಡೆದರು ಎಂದು ಪಾಕಿಸ್ತಾನ ಚುನಾವಣಾ ಆಯೋಗ ಘೋಷಿಸಿದೆ.

ಸೋಮವಾರ ಇಸ್ಲಮಾಬಾದ್‍ನಲ್ಲಿ ಅಧ್ಯಕ್ಷರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಝಾಝಿ ಫಯಾಝ್ ಇಸಾ ಅವರು ಝರ್ದಾರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ನಿರ್ಗಮಿತ ಅಧ್ಯಕ್ಷ ಆರಿಫ್ ಆಲ್ವಿ, ನೂತನ ಪ್ರಧಾನಿ ಶೆಹಬಾಝ್ ಷರೀಫ್, ಸೇನೆಯ ಮುಖ್ಯಸ್ಥ ಜನರಲ್ ಆಸಿಮ್ ಮುನಿರ್, ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News