ನಿಮ್ಮ ರಾಜಕೀಯ ಲಾಭಕ್ಕಾಗಿ ಭಾಷಣಗಳಲ್ಲಿ ಪಾಕಿಸ್ತಾನವನ್ನು ಎಳೆದು ತರಬೇಡಿ: ಭಾರತದ ರಾಜಕಾರಣಿಗಳಿಗೆ ಪಾಕ್ ಆಗ್ರಹ
ಇಸ್ಲಾಮಾಬಾದ್: ನಿಮ್ಮ ರಾಜಕೀಯ ಲಾಭಕ್ಕಾಗಿ ಭಾಷಣಗಳಲ್ಲಿ ಪಾಕಿಸ್ತಾನವನ್ನು ಎಳೆದು ತರಬೇಡಿ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಮುಮ್ತಾಝ್ ಝಹ್ರಾ ಬಲೋಚ್ ಅವರು ಭಾರತದ ರಾಜಕಾರಣಿಗಳನ್ನು ಆಗ್ರಹಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಮೇಲೆ ಭಾರತದ ಹಕ್ಕುಸ್ಥಾಪನೆಯನ್ನು ಪಾಕಿಸ್ತಾನ ತಿರಸ್ಕರಿಸುತ್ತದೆ ಎಂದರು.
“ಜಮ್ಮು ಕಾಶ್ಮೀರದ ಮೇಲೆ ಹಕ್ಕುಸ್ಥಾಪನೆ ಕುರಿತಂತೆ ಭಾರತೀಯ ನಾಯಕರಿಂದ ಪ್ರಚೋದನಾತ್ಮಕ ಹೇಳಿಕೆಗಳು ಹೆಚ್ಚುತ್ತಿದೆ. ಇವುಗಳನ್ನು ಪಾಕ್ ತಿರಸ್ಕರಿಸುತ್ತದೆ. ಈ ಪ್ರಚೋದನಾತ್ಮಕ, ಅತಿಯಾದ ರಾಷ್ಟ್ರವಾದದ ಹೇಳಿಕೆಗಳು ಪ್ರಾದೇಶಿಕ ಶಾಂತಿಗೆ ಮಾರಕವಾಗಿದೆ,” ಎಂದು ಅವರು ಹೇಳಿದ್ದಾರೆ.
“ಐತಿಹಾಸಿಕ ಮತ್ತು ಕಾನೂನಾತ್ಮಕ ವಾಸ್ತವಾಂಶಗಳು ಮತ್ತು ವಾಸ್ತವಿಕ ಚಿತ್ರಣವು ಭಾರತದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ,” ಎಂದು ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಬಿಜೆಪಿ ನಾಯಕರು ಹಲವಾರು ಬಾರಿ ಪಾಕಿಸ್ತಾನವನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರ ಕುರಿತು ಮಾತನಾಡುವಾಗ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಿಂದೆ, ಈಗ ಮತ್ತು ಯಾವತ್ತೂ ಭಾರತದ ಭಾಗವಾಗಿದೆ ಎಂದಿದ್ದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ತಿರುವನಂತಪುರಂನಲ್ಲಿ ಮಾತನಾಡುತ್ತಾ “ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಲ್ಲ ಎಂಬುದನ್ನು ನಾವು ಎಂದಿಗೂ ಒಪ್ಪುವುದಿಲ್ಲ,” ಎಂದಿದ್ದರು.