ಇರಾನ್ ಗಡಿ ಬಳಿ ನಡೆದ ಶೂಟೌಟ್‍ನಲ್ಲಿ ಹತರಾದವರು ಪಾಕ್ ಪ್ರಜೆಗಳು: ವರದಿ
ಇಸ್ಲಮಾಬಾದ್: ಆಗ್ನೇಯ ಇರಾನ್‍ನಲ್ಲಿ ಪಾಕಿಸ್ತಾನದ ಗಡಿಭಾಗದ ಬಳಿ ಶನಿವಾರ ನಡೆದಿದ್ದ ಗುಂಡಿನ ದಾಳಿಯಲ್ಲಿ ಹತ್ಯೆಯಾದ 9 ಮಂದಿ ಪಾಕಿಸ್ತಾನದ ಪ್ರಜೆಗಳು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ದೃಢಪಡಿಸಿದ್ದಾರೆ.
`ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತದ ನೆರೆಯ ಸಿರ್ಖಾನ್ ನಗರದ ಮನೆಯೊಂದಕ್ಕೆ ಶನಿವಾರ ನುಗ್ಗಿದ ಅಪರಿಚಿತ ಸಶಸ್ತ್ರ ವ್ಯಕ್ತಿಗಳು ಮನೆಯಲ್ಲಿದ್ದ 9 ವಿದೇಶೀಯರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದುವರೆಗೆ ಯಾವುದೇ ಸಂಘಟನೆ ಹತ್ಯೆಯ ಹೊಣೆ ವಹಿಸಿಕೊಂಡಿಲ್ಲ' ಎಂದು ಮೆಹರ್ ಸುದ್ಧಿಸಂಸ್ಥೆ ವರದಿ ಮಾಡಿತ್ತು. ಮೂವರು ಶಸ್ತ್ರಸಜ್ಜಿತರು ವಿದೇಶೀಯರು ವಾಸಿಸುತ್ತಿದ್ದ ಮನೆಗೆ ನುಗ್ಗಿ ಗುಂಡು ಹಾರಿಸಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ಮಾಹಿತಿ ನೀಡಿದ್ದಾರೆ. ಈ ವರದಿಗೆ ಪ್ರತಿಕ್ರಿಯಿಸಿರುವ ಜಲೀಲ್ ಅಬ್ಬಾಸ್ ಜಿಲಾನಿ `ಗುಂಡಿನ ದಾಳಿಯಲ್ಲಿ ಹತರಾದವರು ಪಾಕಿಸ್ತಾನಿ ಪ್ರಜೆಗಳೆಂಬುದು ದೃಢಪಟ್ಟಿದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಜರಗಿಸುವಂತೆ ಇರಾನ್ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ' ಎಂದಿದ್ದಾರೆ.
ದುಷ್ಕರ್ಮಿಗಳ ಪತ್ತೆ ಮತ್ತು ತನಿಖೆ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಇರಾನ್‍ನಲ್ಲಿ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಮುದಾಸಿರ್ ಟಿಪು ಹೇಳಿದ್ದಾರೆ.