ಲಾಹೋರ್ ಒಪ್ಪಂದ ಉಲ್ಲಂಘಿಸಿ ಪಾಕ್ ತಪ್ಪು ಮಾಡಿದೆ : ನವಾಝ್ ಶರೀಫ್
ಇಸ್ಲಾಮಾಬಾದ್ : 1999ರಲ್ಲಿ ಆಗಿನ ಭಾರತದ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಹಾಗೂ ತಾನು ಜಂಟಿಯಾಗಿ ಸಹಿಹಾಕಿದ್ದ ಲಾಹೋರ್ ಒಪ್ಪಂದವನ್ನು ಪಾಕಿಸ್ತಾನವೇ ಉಲ್ಲಂಘಿಸಿತ್ತೆಂದು ಆ ದೇಶದ ಮಾಜಿ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ಒಪ್ಪಿಕೊಂಡಿದ್ದಾರೆ.
ಪಿಎಂಎಲ್-ಎನ ಪಕ್ಷದ ಅಧ್ಯಕ್ಷರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಶರೀಫ್ ಅವರು ಕಾರ್ಗಿಲ್ ಯುದ್ಧವನ್ನು ಪರೋಕ್ಷವಾಗಿ ಪ್ರಸ್ತಾವಿಸುತ್ತಾ, 1999ರ ಫೆಬ್ರವರಿ 21ರಂದು ಉಭಯದೇಶಗಳ ನಡುವೆ ಲಾಹೋರ್‌ನಲ್ಲಿ ಏರ್ಪಟ್ಟ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದ್ದನ್ನು ನೆರೆದಿದ್ದ ಸಭಿಕರಿಗೆ ನೆನಪಿಸಿದರು.
‘‘ 1998ರ ಮೇ 28ರಂದು ಪಾಕಿಸ್ತಾನವು ಐದು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿತ್ತು. ವಾಜಪೇಯಿ ಅವರು ಇಲ್ಲಿಗೆ (ಲಾಹೋರ್) ಆಗಮಿಸಿದ್ದರು ಹಾಗೂ ನಮ್ಮೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದರು. ಆದರೆ ನಾವು ಆ ಒಡಂಬಡಿಕೆಯನ್ನು ಉಲ್ಲಂಘಿಸಿದ್ದೆವು. ಅದು ನಾವು ಮಾಡಿದ ತಪ್ಪಾಗಿತ್ತು ’’ ಎಂದು ಶರೀಫ್ ಹೇಳಿದ್ದಾರೆ.
ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷರಾಗಿ ಶರೀಫ್ ಆರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದರು. ಲಾಹೋರ್ ಒಪ್ಪಂದವು ಭಾರತ ಹಾಗೂ ಪಾಕ್ ನಡುವೆ ಶಾಂತಿ ಹಾಗೂ ಸ್ಥಿರತೆಯನ್ನು ಏರ್ಪಡಿಸುವ ಉದ್ದೇಶವನ್ನು ಹೊಂದಿದ್ದು, ಉಭಯ ದೇಶಗಳ ಬಾಂಧವ್ಯ ನಿರ್ಮಾಣದಲ್ಲಿ ಪ್ರಮುಖ ಹೆಜ್ಜೆಯಿಂದ ಬಣ್ಣಿಸಲ್ಪಟ್ಟಿತ್ತು. ಆದರೆ ಈ ಒಪ್ಪಂದ ಏರ್ಪಟ್ಟ ಕೆಲವೇ ತಿಂಗಳುಗಳ ಆನಂತರ ಪಾಕ್ ಸೇನೆಯು ಜಮ್ಮುಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ ಅತಿಕ್ರಮಣ ಮಾಡಿದ್ದುದು ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿತ್ತು.
ಅಣ್ವಸ್ತ್ರ ಪರೀಕ್ಷೆ ನಡೆಸುವುದನ್ನು ನಿಲ್ಲಿಸಲು ಆಗಿನ ಅಮೆರಿಕ ಅಧ್ಯಕ್ಷ ಬಿಲ್‌ಕ್ಲಿಂಟನ್ ಅವರು ಪಾಕಿಸ್ತಾನಕ್ಕೆ 5 ಶತಕೋಟಿ ಡಾಲರ್‌ನ ಕೊಡುಗೆಯನ್ನು ಮುಂದಿಟ್ಟಿದ್ದರು. ಆದರೆ ನಾನದನ್ನು ತಿರಸ್ಕರಿಸಿದ್ದೆ. ಆದರೆ ಇಮ್ರಾನ್‌ಖಾನ್ (ಮಾಜಿ ಪ್ರಧಾನಿ)ರಂತವರು ಒಂದು ವೇಳೆ ಆಗ ನನ್ನ ಕುರ್ಚಿಯಲ್ಲಿ ಇದ್ದಿದ್ದರೆ, ಅವರು ಕ್ಲಿಂಟನ್‌ರ ಕೊಡುಗೆಯನ್ನು ಸ್ವೀಕರಿಸುತ್ತಿದ್ದರು’’ ಎಂದು ಶರೀಫ್ ಹೇಳಿದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.