ತನ್ನ ಕುಟುಂಬವನ್ನೂ ತೊರೆದು ರೋಗಿಗಳ ಶುಶ್ರೂಷೆಗೆ ನಿಂತಿದ್ದ ಫೆಲೆಸ್ತೀನ್‌ ವೈದ್ಯ ಇಸ್ರೇಲ್‌ ದಾಳಿಯಲ್ಲಿ ಮೃತ್ಯು

Update: 2023-11-14 11:38 GMT

ವೈದ್ಯ ಹಮ್ಮಾಮ್ ಅಲ್ಲಾಹ್ (Photo: Democracy Now)

ಗಾಝಾ: ಗಾಝಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿದ್ದ ಫೆಲೆಸ್ತೀನ್‌ನ ವೈದ್ಯ ಹಮ್ಮಾಮ್ ಅಲ್ಲಾಹ್ ಅವರು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸ್ವತಂತ್ರ ಸುದ್ದಿ ಪೋರ್ಟಲ್ ʼಡೆಮಾಕ್ರಸಿ ನೌʼ ವರದಿ ಮಾಡಿದೆ.

ಹಮ್ಮಾಮ್ ಅವರು ತಮ್ಮ ಮರಣದ ಮೊದಲು ನೀಡಿದ ಕೊನೆಯ ಸಂದರ್ಶನದಲ್ಲಿ, ಇಸ್ರೇಲ್‌ ದಾಳಿಯನ್ನು ತೀವ್ರವಾಗಿ ವಿರೋಧಿಸಿದ್ದು, ವೈದ್ಯನಾಗಿ ತನ್ನ ಕರ್ತವ್ಯದ ಬಗ್ಗೆ ಮಾತನಾಡಿದ್ದರು.

ತನ್ನ ಕುಟುಂಬದೊಂದಿಗೆ ದಕ್ಷಿಣ ಗಾಝಾಕ್ಕೆ ಏಕೆ ಹೋಗಲಿಲ್ಲ ಎಂದು ಅವರಲ್ಲಿ ಪ್ರಶ್ನಿಸಿದಾಗ, "ನಾನು ಹೋದರೆ, ನನ್ನ ರೋಗಿಗಳಿಗೆ ಯಾರು ಚಿಕಿತ್ಸೆ ನೀಡುತ್ತಾರೆ? ಅವರು ಪ್ರಾಣಿಗಳಲ್ಲ. ಅವರಿಗೆ ಸರಿಯಾದ ಆರೋಗ್ಯವನ್ನು ಪಡೆಯುವ ಹಕ್ಕಿದೆ." ಎಂದು ಹಮ್ಮಾಮ್ ಅವರು ಡೆಮಾಕ್ರಸಿ ನೌಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೇವಲ ನನ್ನ ಸ್ನಾತಕೋತ್ತರ ಪದವಿಗಾಗಿ ಮಾತ್ರ ನಾನು ನನ್ನ ಜೀವನದ ಒಟ್ಟು 14 ವರ್ಷಗಳ ಕಾಲ ನಾನು ವೈದ್ಯಕೀಯ ಶಾಲೆಗೆ ಹೋಗಿದ್ದೇನೆ ಎಂದು ಭಾವಿಸುತ್ತೀರಾ? ನಾನು ನನ್ನ ಜೀವನದ ಬಗ್ಗೆ ಯೋಚಿಸಿ, ನನ್ನ ರೋಗಿಗಳನ್ನು ಕಡೆಗಣಿಸುತ್ತೇನೆ ಎಂದು ನೀವು ಅಂದುಕೊಂಡಿದ್ದೀರಾ? ನನ್ನ ಜೀವನದ ಬಗ್ಗೆ ಮಾತ್ರ ಯೋಚಿಸಲು ನಾನು ವೈದ್ಯಕೀಯ ಕಲಿಕೆಗೆ ಹೋಗಿದ್ದೇನೆ ಎಂದು ನೀವು ಭಾವಿಸುತ್ತೀರಾ?" ಎಂದು ಹಮ್ಮಾಮ್‌ ಹೇಳಿದ್ದಾರೆ.

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಮ್ಮಾಮ್‌ ಅವರು ತನ್ನ ತಂದೆ, ಮಾವ ಮತ್ತು ಅವರ ಸೋದರ ಮಾವನೊಂದಿಗೆ ಕೊಲ್ಲಲ್ಪಟ್ಟರು ಎಂದು ಆಸ್ಪತ್ರೆಯ ಸಹ ವೈದ್ಯ, ಮೂತ್ರಪಿಂಡಶಾಸ್ತ್ರಜ್ಞ ಬೆನ್ ಥಾಮ್ಸನ್ ತಿಳಿಸಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಯು ನಡೆದಾಗ ಹಮ್ಮಾಮ್‌ ಅವರು ತಮ್ಮ ಪತ್ನಿಯ ಮನೆಯಲ್ಲಿದ್ದರು ಎಂದು ಥಾಮ್ಸನ್ ತಿಳಿಸಿದ್ದಾರೆ.

ಹಮ್ಮಾಮ್‌ ಅವರು, ಪತ್ನಿ ಮತ್ತು 4 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News