ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ, ಫಿಲಿಪ್ಪೀನ್ಸ್ ಹಡಗುಗಳ ಡಿಕ್ಕಿ
ಬೀಜಿಂಗ್ : ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್‍ನ ಹಡಗುಗಳು ಡಿಕ್ಕಿಯಾದ ಬಳಿಕ ಎರಡೂ ದೇಶಗಳು ಪರಸ್ಪರರ ವಿರುದ್ಧ ದೋಷಾರೋಪಣೆ ಮಾಡಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ಫಿಲಿಪ್ಪೀನ್ಸ್ ನ ಹಡಗು ಉದ್ದೇಶಪೂರ್ವಕವಾಗಿ ಹಾಗೂ ಅಪಾಯಕಾರಿ ರೀತಿಯಲ್ಲಿ ಚೀನಾದ ಕರಾವಳಿ ಕಾವಲು ಪಡೆ ಹಡಗಿನೊಂದಿಗೆ ಡಿಕ್ಕಿಯಾಗಿದೆ ಎಂದು ಚೀನಾ ಕರಾವಳಿ ಕಾವಲುಪಡೆಯ ವಕ್ತಾರ ಲಿಯು ಡೆಜುನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿರುವ ಫಿಲಿಪ್ಪೀನ್ಸ್ ಅಧಿಕಾರಿಗಳು , ತಮ್ಮ ಕರಾವಳಿ ಕಾವಲು ಪಡೆಯ ನೌಕೆಗೆ ಚೀನಾದ ಕರಾವಳಿ ಕಾವಲುಪಡೆ ನೌಕೆ ಮೂರು ಬಾರಿ ಡಿಕ್ಕಿಯಾಗಿದ್ದು ನೌಕೆಗೆ ಹಾನಿಯಾಗಿದೆ ಎಂದಿದೆ. ಫಿಲಿಪ್ಪೀನ್ಸ್ ನ ವಿಶೇಷ ಆರ್ಥಿಕ ವಲಯದಲ್ಲಿರುವ ಸಬೀನಾ ದ್ವೀಪದ ನಿಯಂತ್ರಣಕ್ಕೆ ಚೀನಾ ಪ್ರಯತ್ನಿಸಬಹುದು ಎಂಬ ಶಂಕೆಯ ಬಳಿಕ ಈ ನೌಕೆ ಎಪ್ರಿಲ್‍ನಿಂದ ಸಬೀನಾದಲ್ಲಿ ಲಂಗರು ಹಾಕಿದೆ. ಇದಕ್ಕೆ ಚೀನಾ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸಿತ್ತು.
ಆದರೆ ಚೀನಾ ಕರಾವಳಿ ಕಾವಲು ಪಡೆಯ ಕಿರುಕುಳ, ಬೆದರಿಕೆ ಮತ್ತು ಪ್ರಚೋದನಕಾರಿ ಕೃತ್ಯಗಳಿಗೆ ಫಿಲಿಪ್ಪೀನ್ಸ್ ಬಗ್ಗುವುದಿಲ್ಲ ಮತ್ತು ಸಬೀನಾ ದ್ವೀಪದಿಂದ ನೌಕೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಫಿಲಿಪ್ಪೀನ್ಸ್ ಕರಾವಳಿ ಕಾವಲುಪಡೆಯ ಕಮಾಂಡರ್ ಜೆಯ್ ತರೀಲಾ ಹೇಳಿದ್ದಾರೆ. ಅಂತರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ನಾವು ಫಿಲಿಪ್ಪೀನ್ಸ್ ಜತೆ ನಿಲ್ಲುತ್ತೇವೆ' ಎಂದು ಫಿಲಿಪ್ಪೀನ್ಸ್‍ಗೆ ಅಮೆರಿಕದ ರಾಯಭಾರಿ ಮೇರಿಕೇ ಕಾಲ್ರ್ಸನ್ ಹೇಳಿದ್ದಾರೆ.
ಸಂಪೂರ್ಣ ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಪ್ರತಿಪಾದಿಸುತ್ತಿರುವ ಚೀನಾವು ಸಬೀನಾ ದ್ವೀಪ ಪ್ರದೇಶ ಅಂತರಾಷ್ಟ್ರೀಯ ವ್ಯಾಪಾರಕ್ಕೆ ಪ್ರಮುಖ ಜಲಮಾರ್ಗವಾಗಿರುವುದನ್ನು ಮನಗಂಡು ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಬಯಸಿದೆ. ಆದರೆ ಚೀನಾದ ಪ್ರತಿಪಾದನೆಯನ್ನು ವಿಶ್ವಸಂಸ್ಥೆ ನೇತೃತ್ವದ ಮಧ್ಯಸ್ಥಿಕೆ ಸಮಿತಿ ತಿರಸ್ಕರಿಸಿದೆ.