ಫಿಲಿಪ್ಪೀನ್ಸ್| ತೈಲ ಸೋರಿಕೆ ತಡೆಗಟ್ಟಲು ತೇಲುವ ತಡೆಗೋಡೆ ನಿಯೋಜಿಸಲು ನಿರ್ಧಾರ
ಮನಿಲಾ : ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಬಳಿ ಮುಳುಗಿರುವ 1.4 ದಶಲಕ್ಷ ಲೀಟರ್ ಕೈಗಾರಿಕಾ ಇಂಧನವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಹಡಗಿನಿಂದ ತೈಲ ಸೋರಿಕೆಯನ್ನು ನಿಯಂತ್ರಿಸಲು ತೇಲುವ ತಡೆಗೋಡೆ ನಿಯೋಜಿಸಲು ದೇಶದ ಕರಾವಳಿ ರಕ್ಷಣಾ ಪಡೆ ಯೋಜಿಸಿದೆ.
ಮನಿಲಾ ಕೊಲ್ಲಿಯಲ್ಲಿ ತೈಲ ಪ್ರಸರಣವನ್ನು ತಡೆಯುವ ಉದ್ದೇಶದಿಂದ ತೇಲುವ ತಡೆಗೋಡೆಯನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಬಟಾನ್ ಪ್ರಾಂತದ ಲಿಮೆ ಬಂದರಿನಲ್ಲಿ ಸಿದ್ಧಪಡಿಸುತ್ತಿದ್ದಾರೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಫಿಲಿಪ್ಪೀನ್ಸ್ ನ ಇಲೊಯಿಲೊ ನಗರಕ್ಕೆ ಹೋಗುತ್ತಿದ್ದ ಎಂಟಿ ಟೆರಾನೋವಾ ಕಂಟೈನರ್ ಹಡಗು ಬಟಾನ್ ಪ್ರಾಂತದ ಬಳಿ ಮನಿಲಾ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ಮುಳುಗಿದೆ. ಟ್ಯಾಂಕರ್ನಿಂದ ಸೋರಿಕೆಯಾಗಿರುವ ತೈಲ ಸುಮಾರು 3.7 ಕಿ.ಮೀ. ದೂರದವರೆಗೆ ಹರಡಿದ್ದು ಬಲವಾದ ಅಲೆಗಳಿಂದಾಗಿ ಕ್ಷಿಪ್ರವಾಗಿ ಪೂರ್ವ ದಿಕ್ಕಿನತ್ತ ಸಾಗುತ್ತಿರುವ ಚಿತ್ರವನ್ನು ಕರಾವಳಿ ರಕ್ಷಣಾ ಪಡೆ ಬಿಡುಗಡೆಗೊಳಿಸಿತ್ತು.
` ಆದರೆ ಟ್ಯಾಂಕರ್ನ ಡೀಸೆಲ್ ಸೋರಿಕೆಯಾಗಿದೆ. ಕೈಗಾರಿಕಾ ಇಂಧನ ಸೋರಿಕೆಯಾಗಿಲ್ಲ. ಟ್ಯಾಂಕರ್ನಲ್ಲಿರುವ ಸರಕನ್ನು ತೆರವುಗೊಳಿಸಲು 7 ವಾರಗಳ ಗಡು ಹಾಕಿಕೊಳ್ಳಲಾಗಿದೆ' ಎಂದು ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆಯ ವಕ್ತಾರ ರಿಯರ್ ಅಡ್ಮಿರಲ್ ಅರ್ಮಾಂಡೊ ಬಲಿಲೊ ಹೇಳಿದ್ದಾರೆ. ಟ್ಯಾಂಕರ್ನಲ್ಲಿದ್ದ 17 ಸಿಬ್ಬಂದಿಗಳಲ್ಲಿ 16 ಮಂದಿಯನ್ನು ರಕ್ಷಿಸಲಾಗಿದ್ದು ಒಬ್ಬ ಸಿಬ್ಬಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.