ಫಿಲಿಪ್ಪೀನ್ಸ್: ಮುಳುಗಿದ ಹಡಗಿನಿಂದ ತೈಲ ತೆರವು ಕಾರ್ಯ ಆರಂಭ
ಮನಿಲಾ : ಜುಲೈ 25ರಂದು ಮನಿಲಾ ಕೊಲ್ಲಿಯಲ್ಲಿ ಮುಳುಗಿದ್ದ ತೈಲ ಟ್ಯಾಂಕರ್ ಹಡಗಿನಿಂದ ಪರಿಸರ ವಿಪತ್ತು ಸಂಭವಿಸಬಹುದು ಎಂಬ ವರದಿಯ ಹಿನ್ನೆಲೆಯಲ್ಲಿ , ಟ್ಯಾಂಕರ್ನಲ್ಲಿರುವ 1.4 ದಶಲಕ್ಷ ಲೀಟರ್ ಕೈಗಾರಿಕಾ ತೈಲವನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಗೊಂಡಿರುವುದಾಗಿ ವರದಿಯಾಗಿದೆ.
ಟ್ಯಾಂಕರ್ನಿಂದ ತೈಲವನ್ನು ಒಂದು ವಾರದೊಳಗೆ ತೆರವುಗೊಳಿಸುವ ಕಾಮಗಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ ಎಂದು ಫಿಲಿಪ್ಪೀನ್ಸ್ ಕರಾವಳಿ ಕಾವಲುಪಡೆ ಹೇಳಿದೆ. ಗೇಮಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮನಿಲಾ ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ್ದು ಹಡಗಿನ ಓರ್ವ ಸಿಬ್ಬಂದಿ ಮೃತಪಟ್ಟಿದ್ದ. ಮುಳುಗಿದ್ದ ಹಡಗಿನಿಂದ ತೈಲ ಸೋರಿಕೆಯನ್ನು ನಿಯಂತ್ರಿಸಲು ಸುಮಾರು 3 ವಾರ ಕಾರ್ಯಾಚರಣೆ ನಡೆಸಲಾಗಿತ್ತು. ಸೋರಿಕೆಯನ್ನು ಬಹುತೇಕ ನಿಯಂತ್ರಿಸಿದ ಬಳಿಕ ತೈಲವನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಲೂ ಅಲ್ಪಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದ್ದು ಬಾಧಿತ ಪ್ರದೇಶದ ಮೀನುಗಳನ್ನು ತಿನ್ನುವಾಗ ಎಚ್ಚರಿಕೆ ವಹಿಸುವಂತೆ ಸ್ಥಳೀಯ ಆಡಳಿತ ಜನರನ್ನು ಆಗ್ರಹಿಸಿದೆ.