ಧಾರಾಕಾರ ಮಳೆಗೆ ತತ್ತರಿಸಿದ ಫಿಲಿಪ್ಪೀನ್ಸ್ | 12 ಮೃತ್ಯು, 6 ಲಕ್ಷ ಜನರ ಸ್ಥಳಾಂತರ
ಮನಿಲಾ : ಗೆಮಿ ಚಂಡಮಾರುತದಿಂದ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹ ಉಂಟಾಗಿದ್ದು ಶಾಲೆ, ಕಚೇರಿಗಳನ್ನು ಮುಚ್ಚಲಾಗಿದೆ. ಹಣಕಾಸು ಮಾರುಕಟ್ಟೆಗಳನ್ನೂ ಮುಚ್ಚಲಾಗಿದ್ದು ಹಲವು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಚಂಡಮಾರುತ ನೇರವಾಗಿ ಫಿಲಿಪ್ಪೀನ್ಸ್ ಗೆ ಅಪ್ಪಳಿಸದೆ ತೈವಾನ್ನತ್ತ ಮುಂದುವರಿದಿದೆ. ಆದರೆ ಫಿಲಿಪ್ಪೀನ್ಸ್ ನಲ್ಲಿ ಕೆಲದಿನಗಳಿಂದ ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ರಾಜಧಾನಿ ಮನಿಲಾದ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತಗೊಂಡಿವೆ. ಕೆಲವು ದಿನಗಳಿಂದ ನಿರಂತರ ಭೂಕುಸಿತ ಸಂಭವಿಸಿದೆ. ರಸ್ತೆಗಳಲ್ಲಿ ಕುತ್ತಿಗೆ ಮಟ್ಟದ ನೀರು ತುಂಬಿದೆ. ಸುಂಟರಗಾಳಿಯಿಂದ ಕೂಡಿದ ಮಳೆಯಿಂದ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು 6 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ. ಬುಧವಾರ ಮನಿಲಾದಿಂದ ಹೊರಡುವ 114 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಬಂದರುಗಳಲ್ಲಿ 16 ಹಡಗುಗಳು ಮತ್ತು 260 ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ `ತುರ್ತು ನಿಧಿ' ಬಿಡುಗಡೆಗೊಳಿಸುವಂತೆ ಗ್ರೇಟರ್ ಮನಿಲಾ ಪ್ರದೇಶದ 16 ನಗರಗಳ ಮೇಯರ್ಗಳು ಸರಕಾರವನ್ನು ಆಗ್ರಹಿಸಿದ್ದಾರೆ.