ಯುಎಇ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ | ರುಪೇ ಕಾರ್ಡ್ ಸೇವೆ ಜಾರಿ; ಹಲವು ಒಪ್ಪಂದಗಳಿಗೆ ಸಹಿ

Update: 2024-02-13 17:39 GMT

Photo : twitter

ಅಬುಧಾಬಿ: ಎರಡು ದಿನಗಳ ಯುಎಇ ಮತ್ತು ಖತರ್ ದೇಶಗಳ ಪ್ರವಾಸದ ಅಂಗವಾಗಿ ಮಂಗಳವಾರ ಯುಎಇಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯ ಅಪ್ಪುಗೆ ನೀಡಿ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಸ್ವಾಗತಿಸಿದರು.

ಬಳಿಕ ಉಭಯ ಮುಖಂಡರು ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಕುರಿತು ವ್ಯಾಪಕ ಮಾತುಕತೆ ನಡೆಸಿದರು. ಅಬುಧಾಬಿಯಲ್ಲಿ ಯುಪಿಐ ರುಪೇ ಕಾರ್ಡ್ ಸೇವೆಯನ್ನು ಇದೇ ಸಂದರ್ಭ ಪರಿಚಯಿಸಲಾಗಿದೆ. ಯುಎಇ ಅಧ್ಯಕ್ಷರ ಜತೆಗಿನ ಮಾತುಕತೆಯ ಬಳಿಕ ಸಹಿಹಾಕಲಾದ ದ್ವಿಪಕ್ಷೀಯ ಒಪ್ಪಂದಗಳು ಎಲ್ಲಾ ಜಿ-20 ದೇಶಗಳಲ್ಲೂ ಒಂದು ಮಹತ್ವದ ಸುದ್ಧಿಯಾಗಲಿದೆ ಮತ್ತು ಇದು ಎರಡೂ ದೇಶಗಳ ಆರ್ಥಿಕತೆಯನ್ನು ಸಶಕ್ತಗೊಳಿಸಲಿದೆ. ಕಳೆದ 9 ವರ್ಷಗಳಲ್ಲಿ ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುಎಇ-ಭಾರತ ಸಹಕಾರ ಸಂಬಂಧ ಬಹುಪಟ್ಟು ಹೆಚ್ಚಿದೆ.

ಅಬುಧಾಬಿಯಲ್ಲಿ ಹಿಂದು ದೇವಾಲಯದ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಯುಎಇ ಅಧ್ಯಕ್ಷರು ಭಾರತದೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಯುಎಇ ಸರಕಾರದ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಮೋದಿ ಹೇಳಿದ್ದಾರೆ. ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಮೋದಿ ಫೆಬ್ರವರಿ 14(ಬುಧವಾರ) ಉದ್ಘಾಟಿಸಲಿದ್ದಾರೆ.

ಉಭಯ ಮುಖಂಡರ ಸಭೆಯ ಬಳಿಕ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅವುಗಳೆಂದರೆ

* ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ.

* ವಿದ್ಯುತ್ ಅಂತರ್ ಸಂಪರ್ಕ ಮತ್ತು ಮತ್ತು ವ್ಯಾಪಾರ ಒಪ್ಪಂದ.

* ಭಾರತ- ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಲ್ಲಿ ಅಂತರ್ ಸರಕಾರಿ ಚೌಕಟ್ಟಿನ ಒಪ್ಪಂದ.

* ಡಿಜಿಟಲ್ ಮೂಲಸೌಕರ್ಯ ಯೋಜನೆಗಳಲ್ಲಿ ಸಹಕಾರ ಒಪ್ಪಂದ.

* ಪಾರಂಪರಿಕ ಕೇಂದ್ರ ಮತ್ತು ಮ್ಯೂಸಿಯಂಗಳ ಕ್ಷೇತ್ರದಲ್ಲಿ ಒಪ್ಪಂದ.

* ತ್ವರಿತ ಪಾವತಿ ವೇದಿಕೆಗಳ ಪರಸ್ಪರ ಸಂಪರ್ಕ ಒಪ್ಪಂದ(ಭಾರತದಲ್ಲಿ ಯುಪಿಐ; ಯುಎಇಯಲ್ಲಿ ಎಎಎನ್‍ಐ)

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News