ಯುರೋಪ್ ನಲ್ಲಿ ಎಂಫಾಕ್ಸ್ ಸೋಂಕು ಹರಡುವ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2024-08-16 14:14 GMT

   ಸಾಂದರ್ಭಿಕ ಚಿತ್ರ

ಸ್ಟಾಕ್ಹೋಮ್: ಆಫ್ರಿಕಾದಲ್ಲಿ ಅಪಾಯಕಾರಿ ರೀತಿಯಲ್ಲಿ ಕ್ಷಿಪ್ರವಾಗಿ ಹರಡಿದ ಎಂಫಾಕ್ಸ್(ಈ ಹಿಂದಿನ ಮಂಕಿಪಾಕ್ಸ್) ವೈರಸ್ ನ ಅಲೆ ಇದೀಗ ಯುರೋಪ್‌ಗೂ ಅಪ್ಪಳಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಎಚ್ಚರಿಕೆ ನೀಡಿದೆ.

ಆಫ್ರಿಕಾದಲ್ಲಿ ಕಾಣಿಸಿಕೊಂಡ ವೈರಸ್ ಸೋಂಕಿತರ ಸಂಖ್ಯೆ ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದಂತೆಯೇ ಎಂಫಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಘಟನೆ ಘೋಷಿಸಿತ್ತು. ಇದೀಗ ನಿಕಟ ಸಂಪರ್ಕದ ಮೂಲಕ ಹರಡುವ ಎಂಫಾಕ್ಸ್ ಸೋಂಕು ಪ್ರಕರಣ ಸ್ವೀಡನ್ ನಲ್ಲಿ ದಾಖಲಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಸ್ವೀಡನ್ ಪ್ರಜೆ ಆಫ್ರಿಕಾದಲ್ಲಿದ್ದಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಸಾರವಾಗುವ ಮಾರಣಾಂತಿಕ ಕ್ಲಾಡ್ ಎಲ್ಬಿ ತಳಿಯ ಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಯುರೋಪಿಯನ್ ಖಂಡದಲ್ಲಿ ಒಂದು ಪ್ರಕರಣ ಹೊರಹೊಮ್ಮಿರುವುದು ಎಂಫಾಕ್ಸ್ ನ ಕ್ಷಿಪ್ರ ಅಂತರಾಷ್ಟ್ರೀಯ ಹರಡುವಿಕೆಗೆ ಕಾರಣವಾಗಬಹುದು. ಸ್ವೀಡನ್ ನಲ್ಲಿನ ಪ್ರಕರಣವು ಯುರೋಪ್ ನಲ್ಲಿ ಡಜನ್ಗಟ್ಟಲೆ ಪತ್ತೆಯಾಗದ ಪ್ರಕರಣಗಳ ಸಾಧ್ಯತೆಯನ್ನು ಮೂಡಿಸಿದೆ ಎಂದು ಸ್ವೀಡನ್ ನ ಆರೋಗ್ಯಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಸ್ವೀಡನ್ ನಲ್ಲಿ ಎಂಫಾಕ್ಸ್ ಕ್ಲಾಡ್ 1 ಪ್ರಕರಣ ದೃಢಪಟ್ಟಿರುವುದು ನಮ್ಮ ಪ್ರಪಂಚದ ಪರಸ್ಪರ ಸಂಪರ್ಕದ ಸ್ಪಷ್ಟ ಪ್ರತಿಬಿಂಬವಾಗಿದೆ. ಮುಂಬರುವ ವಾರಗಳಲ್ಲಿ ಯುರೋಪಿಯನ್ ಪ್ರದೇಶದಲ್ಲಿ ಕ್ಲಾಡ್ 1ರ ಮತ್ತಷ್ಟು ಪ್ರಕರಣದ ಸಾಧ್ಯತೆಯನ್ನು ಇದು ತೆರೆದಿಟ್ಟಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಯುರೋಪಿಯನ್ ಪ್ರಾದೇಶಿಕ ಕಚೇರಿ ಹೇಳಿದೆ. ಕಾಂಗೊ ಗಣರಾಜ್ಯದಲ್ಲಿ ಎಂಫಾಕ್ಸ್ ಪ್ರಕರಣ ತೀವ್ರಗತಿಯಲ್ಲಿ ಉಲ್ಬಣಿಸಿದ ಬಳಿಕ ಎಂಫಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಘಟನೆ ಗುರುವಾರ ಘೋಷಿಸಿತ್ತು.

2023ರ ಜನವರಿಯಿಂದ ಕಾಂಗೋ ಗಣರಾಜ್ಯದಲ್ಲಿ ಎಂಫಾಕ್ಸ್ ಸೋಂಕು ಉಲ್ಬಣಿಸಿದಂದಿನಿಂದ 27,000 ಸೋಂಕು ಪ್ರಕರಣ ಹಾಗೂ 1,100ಕ್ಕೂ ಅಧಿಕ ಸಾವಿನ ಪ್ರಕರಣ ದಾಖಲಾಗಿದೆ. ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮಂಕಿಫಾಕ್ಸ್ ವೈರಸ್ನಿಂದ ಉಂಟಾಗುವ ರೋಗವು ಚರ್ಮದ ಮೇಲೆ ಗುಳ್ಳೆ ಅಥವಾ ದದ್ದುಗಳನ್ನು ಉಂಟು ಮಾಡುತ್ತದೆ. ನೋವಿನಿಂದ ಕೂಡಿದ ದದ್ದುಗಳಲ್ಲಿ ಕೀವು ಅಥವಾ ದ್ರವ ತುಂಬಿರುತ್ತದೆ. ವಿಸ್ತರಿಸಿದ ದುಗ್ದರಸ ಗ್ರಂಥಗಳು ಮತ್ತು ಜ್ವರವನ್ನು ಉಂಟು ಮಾಡುತ್ತದೆ ಮತ್ತು ಕೆಲವರನ್ನು ತುಂಬಾ ಅಸ್ವಸ್ಥರನ್ನಾಗಿ ಮಾಡುತ್ತದೆ.

ನೈಜೀರಿಯಾದಲ್ಲಿ 39 ಪ್ರಕರಣ

ನೈಜೀರಿಯಾದಲ್ಲಿ ಈ ವರ್ಷ ಎಂಫಾಕ್ಸ್ ನ 39 ಪ್ರಕರಣ ದಾಖಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ದೇಶದಾದ್ಯಂತ ಈ ವರ್ಷ 788 ಶಂಕಿತ ಪ್ರಕರಣಗಳಲ್ಲಿ 39 ಪ್ರಕರಣ ದೃಢಪಟ್ಟಿದೆ ಎಂದು ನೈಜೀರಿಯಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಪ್ರಧಾನ ನಿರ್ದೇಶಕ ಜೈಡ್ ಇದ್ರಿಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ನೈಜೀರಿಯಾದಲ್ಲಿ ಎಂಫಾಕ್ಸ್ ನ ಪ್ರಥಮ ಪ್ರಕರಣ 1971ರಲ್ಲಿ ಪತ್ತೆಯಾಗಿದ್ದು ಆ ಬಳಿಕ ಪ್ರತೀ ವರ್ಷ ದಾಖಲಾಗುತ್ತಿದೆ. ಆದರೆ ಈ ವರ್ಷ ಮಾತ್ರ ಗರಿಷ್ಟ ಮಟ್ಟಕ್ಕೆ ತಲುಪಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News