ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ: ರಷ್ಯಾ ಅಧ್ಯಕ್ಷರ ಆರೋಗ್ಯದ ಕುರಿತ ವದಂತಿಗಳ ಮಧ್ಯೆ ಝೆಲೆನ್ಸ್ಕಿ ಹೇಳಿಕೆ

ವ್ಲಾದಿಮಿರ್ ಪುಟಿನ್ / ವೊಲೊದಿಮಿರ್ ಝೆಲೆನ್ಸ್ಕಿ (PTI)
ಕೀವ್ : ವ್ಲಾದಿಮಿರ್ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದು, ರಷ್ಯಾದ ಅಧ್ಯಕ್ಷರ ಆರೋಗ್ಯದ ಕುರಿತ ಊಹಾಪೋಹಗಳ ಮಧ್ಯೆ ಈ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಪ್ಯಾರಿಸ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಝೆಲೆನ್ಸ್ಕಿ, ವ್ಲಾದಿಮಿರ್ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ. ಇದು ಎರಡು ರಾಷ್ಟ್ರಗಳ ನಡುವಿನ ಯುದ್ಧಕ್ಕೆ ಅಂತ್ಯವಾಡಲಿದೆ ಎಂದು ಹೇಳಿದರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವೊಲೊದಿಮಿರ್ ಝೆಲೆನ್ಸ್ಕಿ, ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ ಮತ್ತು ಅದು ಸತ್ಯ. ಆ ಬಳಿಕ ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳಿದರು.
ಪುಟಿನ್ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಲವಾರು ತಿಂಗಳುಗಳಿಂದ ಹರಿದಾಡುತ್ತಿವೆ. ಈ ಮೊದಲು ಪುಟಿನ್ ನಿರಂತರವಾಗಿ ಕೆಮ್ಮುತ್ತಿರುವ ವೀಡಿಯೊಗಳು ವೈರಲ್ ಆಗಿತ್ತು. ಇದಲ್ಲದೆ 2022ರಲ್ಲಿ ಮಾಜಿ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗಿನ ಸಭೆಯ ವೇಳೆ ಪುಟಿನ್ ಅಸ್ವಸ್ಥರಾದಂತೆ ಕಂಡು ಬಂದಿದ್ದರು. ಅವರು ಮಾತುಕತೆಯ ವೇಳೆ ಮೇಜನ್ನು ಆಧಾರವಾಗಿ ಹಿಡಿದುಕೊಂಡಿದ್ದರು. ಈ ಕುರಿತ ವೀಡಿಯೊ ವೈರಲ್ ಆಗಿತ್ತು.
ಉಕ್ರೇನ್ ಮತ್ತು ರಷ್ಯಾ ನಡುವೆ ಕಳೆದ ಮೂರು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಕಳೆದ ವಾರ ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿದ್ದ 30 ದಿನಗಳ ಕದನ ವಿರಾಮ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಎರಡೂ ದೇಶಗಳು ಪರಸ್ಪರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದೆ. ಈ ವಾರ ರಷ್ಯಾ 117 ಡ್ರೋನ್ ದಾಳಿಗಳನ್ನು ನಡೆಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.