ಕುರ್‌ಆನ್ ಗೆ ಬೆಂಕಿ:ಇಸ್ಲಾಮಿಕ್ ಸಹಕಾರ ಸಂಘಟನೆ ಖಂಡನೆ

Update: 2023-07-02 17:50 GMT

Photo: Reuters

ರಿಯಾದ್: ಸ್ವೀಡನ್ ನಲ್ಲಿ ಕುರ್‌ಆನ್ ಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಇಸ್ಲಾಮಿಕ್ ಸಹಕಾರ ಸಂಘಟನೆ(OIC) ತೀವ್ರವಾಗಿ ಖಂಡಿಸಿದ್ದು, ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವ ಪುನರಾವರ್ತಿತ ಕೃತ್ಯಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಧಾರ್ಮಿಕ ದ್ವೇಷದ ಯಾವುದೇ ಸಮರ್ಥನೆಯನ್ನು ಸ್ಪಷ್ಟವಾಗಿ ನಿಷೇಧಿಸುವ ಅಂತರಾಷ್ಟ್ರೀಯ ಕಾನೂನಿನ ತುರ್ತು ಅನ್ವಯದ ಕುರಿತು ನಾವು ಅಂತರಾಷ್ಟ್ರೀಯ ಸಮುದಾಯಕ್ಕೆ ನಿರಂತರ ಜ್ಞಾಪನೆಗಳನ್ನು ರವಾನಿಸಬೇಕಾಗಿದೆ ಎಂದು ಒಐಸಿಯ ಪ್ರಧಾನ ಕಾರ್ಯದರ್ಶಿ ಹಿಸೇನ್ ಬ್ರಾಹಿಮ್ ತಹಾ ಹೇಳಿದ್ದಾರೆ.

ಸೌದಿ ಅರೆಬಿಯಾ ಆಹ್ವಾನದ ಮೇರೆಗೆ ಜೆದ್ದಾದಲ್ಲಿನ ಒಐಸಿ ಪ್ರಧಾನ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಪವಿತ್ರ ಕುರ್ಆನ್ ನ ಅಪವಿತ್ರೀಕರಣದ ವಿರುದ್ಧ ಒಗ್ಗಟ್ಟಿನ ನಿಲುವನ್ನು ವ್ಯಕ್ತಪಡಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನರ ನಡುವಿನ ಪರಸ್ಪರ ಗೌರವ ಮತ್ತು ಸಾಮರಸ್ಯವನ್ನು ಹಾಳು ಮಾಡುವ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಹರಡುವ ಅಂತರಾಷ್ಟ್ರೀಯ ಪ್ರಯತ್ನಗಳನ್ನು ವಿರೋಧಿಸುವ ಇಂತಹ ಕೃತ್ಯಗಳ ಗಂಭೀರತೆಯನ್ನು ಒಐಸಿ ಎಚ್ಚರಿಸಿದೆ.

ಈ ಹೇಯ ದಾಳಿಗಳು ಪುನರಾವರ್ತನೆ ಆಗುವುದನ್ನು ಖಂಡಿಸಿರುವ ಒಐಸಿ, ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ದೇಶಗಳ ಸರಕಾರವನ್ನು ಆಗ್ರಹಿಸಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News