ಗಾಝಾದ ಮೇಲೆ ಪೂರ್ಣಪ್ರಮಾಣದ ಆಕ್ರಮಣಕ್ಕೆ ಸನ್ನದ್ಧ: ಇಸ್ರೇಲ್ ರಕ್ಷಣಾ ಪಡೆ
ಟೆಲ್ಅವೀವ್: ಇಸ್ರೇಲ್-ಹಮಾಸ್ ಯುದ್ಧ 18ನೇ ದಿನಕ್ಕೆ ಕಾಲಿರಿಸುತ್ತಿದ್ದಂತೆಯೇ, ಗಾಝಾದ ಮೇಲೆ ಪೂರ್ಣ ಪ್ರಮಾಣದಲ್ಲಿ ನೆಲದ ಮೇಲಿನ ಆಕ್ರಮಣ ನಡೆಸಲು ಸೇನೆ ಸನ್ನದ್ಧವಾಗಿದೆ. ಆದರೆ ರಾಜಕೀಯ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ಹೇಳಿದ್ದಾರೆ.
ಈ ಮಧ್ಯೆ, ಇಸ್ರೇಲ್ ನ ಟ್ಯಾಂಕ್ಗಳು ಹಾಗೂ ತುಕಡಿ ಗಾಝಾದಿಂದ ಕೇವಲ 5 ಕಿ.ಮೀ ದೂರದಲ್ಲಿ ಬೀಡುಬಿಟ್ಟಿವೆ ಎಂದು ಸೇನೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ಕೆಲವು ಪ್ರಮುಖ ಬೆಳವಣಿಗೆಗಳು:
* ಸಂಘರ್ಷದಲ್ಲಿ ಇದುವರೆಗೆ ಗಾಝಾದಲ್ಲಿ ಸಾವಿನ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಇಸ್ರೇಲ್ ನಲ್ಲಿ ಮೃತರ ಸಂಖ್ಯೆ 1,400 ಆಗಿದ್ದರೆ 200ಕ್ಕೂ ಅಧಿಕ ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ.
* ಇಸ್ರೇಲ್ ನ ಪ್ರಜೆಗಳನ್ನು ಹಮಾಸ್ ಎಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಕುರಿತು ನಿಖರ ಮಾಹಿತಿ ಒದಗಿಸುವ ಗಾಝಾ ಪಟ್ಟಿಯ ನಿವಾಸಿಗಳಿಗೆ ನಗದು ಪುರಸ್ಕಾರ ನೀಡುವ ಘೋಷಣೆಯುಳ್ಳ ಕರಪತ್ರಗಳನ್ನು ಇಸ್ರೇಲ್ ಸೇನೆಯ ವಿಮಾನ ಗಾಝಾ ಪಟ್ಟಿಯಲ್ಲಿ ಉದುರಿಸಿದೆ ಎಂದು ವರದಿಯಾಗಿದೆ.
* ಹಮಾಸ್ ವಿರುದ್ಧ ಅಂತರಾಷ್ಟ್ರೀಯ ಒಕ್ಕೂಟವನ್ನು ರಚಿಸುವ ಅಗತ್ಯವಿದೆ ಎಂದು ಇಸ್ರೇಲ್ ಗೆ ಭೇಟಿ ನೀಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಪ್ರತಿಪಾದಿಸಿದ್ದಾರೆ.
* ಇಸ್ರೇಲ್ ನ ಆಕ್ರಮಣದ ವಿರುದ್ಧ ಮುಸ್ಲಿಂ ಜಗತ್ತು ಒಂದಾಗಬೇಕಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.
* ಹಮಾಸ್ ವಿರುದ್ಧದ ಹೋರಾಟದಲ್ಲಿ ಫೆಲೆಸ್ತಿನೀಯರನ್ನು ಕೊಲ್ಲಲು ಇಸ್ರೇಲ್ ಗೆ ಅನಿರ್ಬಂಧಿತ ಅಧಿಕಾರ ನೀಡದಂತೆ ಖತರ್ ಮಂಗಳವಾರ ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದೆ.
* ಗಾಝಾದ ಮೇಲಿನ ವೈಮಾನಿಕ ದಾಳಿಯನ್ನು ಇಸ್ರೇಲ್ ಮುಂದುವರಿಸಿರುವಂತೆಯೇ, ಗಾಝಾದಲ್ಲಿ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತಿದ್ದು ತಕ್ಷಣ ಕದನ ವಿರಾಮ ಜಾರಿಗೊಳ್ಳಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಆಗ್ರಹಿಸಿದ್ದಾರೆ.