ಚಾಡ್ ನಲ್ಲಿ ಬಂಡುಕೋರರ ದಾಳಿ | 17 ಯೋಧರ ಸಹಿತ 113 ಮಂದಿ ಮೃತ್ಯು
Update: 2024-11-11 16:51 GMT
ಎನ್'ಡಿಜಮೆನ : ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ಬೊಕೊ ಹರಮ್ ಬಂಡುಕೋರರು ಮಿಲಿಟರಿ ತಪಾಸಣಾ ಕೇಂದ್ರದ ಮೇಲೆ ನಡೆಸಿದ ದಾಳಿಯಲ್ಲಿ 17 ಯೋಧರು ಮೃತಪಟ್ಟಿದ್ದಾರೆ. ಸೇನೆಯ ಕಾರ್ಯಾಚರಣೆಯಲ್ಲಿ 96 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾಪಡೆಯ ವಕ್ತಾರ ಜ| ಇಸಾಖ್ ಅಚೈಕ್ ಹೇಳಿದ್ದಾರೆ.
ಚಾಡ್ನ ಪಶ್ಚಿಮದ ಲೇಕ್ ಚಾಡ್ ಪ್ರಾಂತದಲ್ಲಿ ಶನಿವಾರ ರಾತ್ರಿ ಬಂಡುಕೋರರು ದಾಳಿ ನಡೆಸಿರುವುದಾಗಿ ಸೇನೆ ಹೇಳಿದೆ. `ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ದಾಳಿಕೋರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಲೇಕ್ ಚಾಡ್ ಪ್ರದೇಶವನ್ನು ಬೊಕೊ ಹರಮ್ ಬಂಡುಕೋರರಿಂದ ಮುಕ್ತಗೊಳಿಸುವ ಕಾರ್ಯಾಚರಣೆ ತೀವ್ರಗೊಳ್ಳಲಿದೆ' ಎಂದು ಸೇನೆಯ ಮುಖ್ಯಸ್ಥರು ಹೇಳಿದ್ದಾರೆ.
ಲೇಕ್ ಚಾಡ್ ಪ್ರಾಂತದಲ್ಲಿ ಇತ್ತೀಚಿನ ದಿನಗಳಲ್ಲಿ ಬಂಡುಕೋರರ ಚಟುವಟಿಕೆ ತೀವ್ರಗೊಂಡಿದ್ದು ಕಳೆದ ತಿಂಗಳು ಮಿಲಿಟರಿ ನೆಲೆಯ ಮೇಲೆ ಬಂಡುಕೋರರ ದಾಳಿಯಲ್ಲಿ 40 ಯೋಧರು ಸಾವನ್ನಪ್ಪಿದ್ದರು.