ಮಾನವಹಕ್ಕುಗಳ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

Update: 2024-07-09 05:30 GMT

ಮಾನವಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ

ವಾಷಿಂಗ್ಟನ್‌: ಮಾನವಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರ ಬಂಧನ ಮತ್ತು ಸಾವಿನ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸುವಂತೆ ಅಮೆರಿಕದ ಸಂಸತ್‌ನಲ್ಲಿ ನಿರ್ಣಯವೊಂದನ್ನು ಮಂಡಿಸಲಾಗಿದೆ. ನಿರ್ಣಯವು ಭಯೋತ್ಪಾದನೆ ವಿರೋಧಿ ಕಾನೂನುಗಳ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿ, ಜೈಲಿನಲ್ಲೇ ನಿಧನರಾದ ಸ್ಟ್ಯಾನ್‌ ಸ್ವಾಮಿ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿ ಸಂಸದರಾದ ಜಿಮ್ ಮೆಕ್‌ಗವರ್ನ್, ಆಂಡ್ರೆ ಕಾರ್ಸನ್, ಜುವಾನ್ ವರ್ಗಾಸ್ ಸಂಸತ್ತಿನಲ್ಲಿ ಈ ನಿರ್ಣಯವನ್ನು ಮಂಡಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಇದು ಭಾರತ ಸಹಿತ ಜಗತ್ತಿನ ಎಲ್ಲ ಸರ್ಕಾರಗಳಿಗೂ ಅನ್ವಯವಾಗುತ್ತದೆ ಎಂದು ನಿರ್ಣಯವು ಸ್ಪಷ್ಟಪಡಿಸಿದೆ.

"ಫಾದರ್ ಸ್ಟ್ಯಾನ್‌ ಅವರು ತಮ್ಮ ಇಡೀ ಜೀವನವನ್ನು ಧ್ವನಿಯಿಲ್ಲದವರಿಗೆ ಧ್ವನಿಯಾಗಲು ಮುಡಿಪಾಗಿಟ್ಟಿದ್ದರು. ಆದಿವಾಸಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಅವರು ಜೈಲಿನಲ್ಲಿದ್ದಾಗ ನಿಂದನೆಗಳನ್ನು ಎದುರಿಸಿದ್ದರು. ಅವರಿಗೆ ಸೂಕ್ತ ಚಿಕಿತ್ಸೆಯನ್ನೂ ನಿರಾಕರಿಸಲಾಗಿತ್ತು ಎಂಬ ವಿಷಯ ಕೇಳಿ ಗಾಬರಿಯಾಯಿತು. ಸ್ಟ್ಯಾನ್ ಅವರು ತಳ ಸಮುದಾಯಗಳ ಒಳಿತಿಗಾಗಿ ತೋರಿದ ಬದ್ದತೆಯನ್ನು ಮರೆಯಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ನಿರ್ಣಯವನ್ನು ಮಂಡಿಸಲಾಗುತ್ತಿದೆ" ಎಂದು ನಿರ್ಣಯ ಮಂಡಿಸುವ ವೇಳೆ ಸಂಸದ ವರ್ಗಾಸ್‌ ಹೇಳಿದರು.

ಫಾದರ್ ಸ್ಟಾನ್ ಅವರನ್ನು 2020 ರ ಅಕ್ಟೋಬರ್ 8 ರಂದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಬಂಧಿಸಲಾಗಿತ್ತು. ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ತಿನ ಹಿಂಸಾಚಾರದಲ್ಲಿ ಸ್ಟಾನ್‌ ಸ್ವಾಮಿ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News