ಸಿರಿಯಾದಲ್ಲಿ ರಾಜಕೀಯ ವ್ಯವಸ್ಥೆ ಕುಸಿಯುವ ಅಪಾಯ : ವಿಶ್ವಸಂಸ್ಥೆ ಪ್ರತಿನಿಧಿ ಎಚ್ಚರಿಕೆ

Update: 2024-12-14 15:43 GMT

ಸಾಂದರ್ಭಿಕ ಚಿತ್ರ | PC : PTI

ಅಕಾಬ : ಸಿರಿಯಾದ ಪ್ರಮುಖ ರಾಜಕೀಯ ವ್ಯವಸ್ಥೆ ಕುಸಿಯುವ ಅಪಾಯವನ್ನು ತಪ್ಪಿಸಲು ಜಾಗತಿಕ ಶಕ್ತಿಗಳು ಆದ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಗೈರ್ ಪೆಡರ್ಸನ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಸಿರಿಯಾ ಬಿಕ್ಕಟ್ಟಿಗೆ ಸೌಹಾರ್ದಯುತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಜೋರ್ಡಾನ್‍ನ ಅಕಾಬ ನಗರದಲ್ಲಿ ನಡೆದ ರಾಜತಾಂತ್ರಿಕ ಸಭೆಯಲ್ಲಿ ಮಾತನಾಡಿದ ಪೆಡರ್ಸನ್ ` ಸಿರಿಯಾದಲ್ಲಿ ಮುಂದಿನ ಸರಕಾರವನ್ನು ರಚಿಸಲು ವಿಶ್ವಾಸಾರ್ಹ ಮತ್ತು ಅಂತರ್ಗತ ರಾಜಕೀಯ ಪ್ರಕ್ರಿಯೆಯನ್ನು ವಿಶ್ವಸಂಸ್ಥೆ ಬೆಂಬಲಿಸಲಿದೆ' ಎಂದರು. ಸಾಂಸ್ಥಿಕ ವ್ಯವಸ್ಥೆ ಕುಸಿಯದಂತೆ ನಾವು ಖಚಿತ ಪಡಿಸಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಬೇಗ ಮಾನವೀಯ ನೆರವನ್ನು ತಲುಪಿಸಬೇಕು. ಇದರಲ್ಲಿ ನಾವು ಯಶಸ್ವಿಯಾದರೆ ಬಹುಷಃ ಸಿರಿಯಾ ಜನತೆಗೆ ಹೊಸ ಅವಕಾಶ ಲಭಿಸಬಹುದು ಎಂದವರು ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಅರಬ್ ದೇಶಗಳ ಪ್ರತಿನಿಧಿಗಳು, ಟರ್ಕಿ, ಯುರೋಪಿಯನ್ ಯೂನಿಯನ್‍ನ(ಇಯು) ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಿರಿಯಾದಲ್ಲಿನ ಎಲ್ಲಾ ವೈವಿಧ್ಯಮಯ ಜನಾಂಗೀಯ ಮತ್ತು ಧಾರ್ಮಿಕ ಸಮುದಾಯಗಳನ್ನು ಪ್ರತಿನಿಧಿಸುವ ಅಂತರ್ಗತ ಪ್ರಕ್ರಿಯೆಗೆ ಕರೆ ನೀಡಿದ ಬ್ಲಿಂಕೆನ್, ಸಿರಿಯಾದಲ್ಲಿ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಹಾಗೂ ಮಾನವೀಯ ನೆರವು ಒದಗಿಸುವಲ್ಲಿ ವಿಶ್ವಸಂಸ್ಥೆ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದರು. ಸಿರಿಯಾದ ನೂತನ ಆಡಳಿತದ ಜತೆ ಶೀಘ್ರವೇ ಸಂಪರ್ಕ ಸಾಧಿಸಲು ಯುರೋಪಿಯನ್ ಯೂನಿಯನ್ ಬಯಸಿದೆ ಎಂದು ಇಯು ಪ್ರತಿನಿಧಿ ಹೇಳಿದ್ದಾರೆ. ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿಯ ಸಿಬ್ಬಂದಿಗಳ ಉಪಸ್ಥಿತಿಯನ್ನು ಮುಂದುವರಿಸುವಂತೆ ತಿಳಿಸುವ ಮೂಲಕ ಸಿರಿಯಾದ ಹೊಸ ಸರಕಾರ ರಚನಾತ್ಮಕ ಪ್ರಾಥಮಿಕ ಸಂಕೇತಗಳನ್ನು ರವಾನಿಸಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಶುಕ್ರವಾರ ವರ್ಚುವಲ್ ವೇದಿಕೆಯ ಮೂಲಕ ಸಭೆ ಸೇರಿದ ಜಿ7 ದೇಶಗಳ ಮುಖಂಡರು `ಸಿರಿಯಾದಲ್ಲಿ ಅಂತರ್ಗತ ರಾಜಕೀಯ ಪ್ರಕ್ರಿಯೆಯ ವ್ಯಾಖ್ಯಾನದ ಮೂಲಕ ಶಾಂತಿಯುತ ಮತ್ತು ಕ್ರಮಬದ್ಧ ಪರಿವರ್ತನೆ'ಯನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

 

ಸಿರಿಯಾ ಮಿಲಿಟರಿ ನೆಲೆಗಳ ಮೇಲೆ ಮುಂದುವರಿದ ಇಸ್ರೇಲ್ ದಾಳಿ  

ಸಿರಿಯಾ ರಾಜಧಾನಿ ದಮಾಸ್ಕಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಶನಿವಾರ ಬೆಳಿಗ್ಗೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಉತ್ತರ ದಮಾಸ್ಕಸ್‍ನ ಬರ್ಜೆಹ್‍ನಲ್ಲಿ ವೈಜ್ಞಾನಿಕ ಸಂಸ್ಥೆ ಹಾಗೂ ಮಿಲಿಟರಿಗೆ ಸಂಬಂಧಿಸಿದ ಇತರ ತಾಣಗಳ ಮೇಲೆ ಹಾಗೂ ದಮಾಸ್ಕಸ್ ಬಳಿಯ ಮಿಲಿಟರಿ ವಿಮಾನ ನಿಲ್ದಾಣ, ಖಲಾಮನ್ ಪ್ರದೇಶದಲ್ಲಿ ಸ್ಕಡ್ ಬ್ಯಾಲಿಸ್ಟಿಕ್ ಕ್ಷಿಪಣಿ ಗೋದಾಮುಗಳು, ಕ್ಷಿಪಣಿ ಉಡಾವಣಾ ವ್ಯವಸ್ಥೆ, ಈ ಪ್ರದೇಶದಲ್ಲಿ ಪರ್ವತದ ಕೆಳಭಾಗದಲ್ಲಿ ಭೂಗತ ರಾಕೆಟ್ ಗೋದಾಮು, ಸುರಂಗ ಮಾರ್ಗಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು `ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾ ಏಜೆನ್ಸಿ' ವರದಿ ಮಾಡಿದೆ.

ಪದಚ್ಯುತ ಅಸ್ಸಾದ್ ಆಡಳಿತಕ್ಕೆ ಸೇರಿದ್ದ ಶಸ್ತ್ರಾಸ್ತ್ರಗಳು ಸಿರಿಯಾದ ಬಂಡುಕೋರ ಪಡೆಯ ಕೈ ಸೇರದಂತೆ ತಡೆಯುವುದು ದಾಳಿಯ ಉದ್ದೇಶವಾಗಿದೆ . ದಮಾಸ್ಕಸ್‍ನ ಖಾಸ್ಯೂನ್ ಪರ್ವತದ ತುದಿಯಲ್ಲಿ ಸ್ಥಾಪಿಸಿರುವ ಕ್ಷಿಪಣಿ ಉಡಾವಣಾ ನೆಲೆ, ದಕ್ಷಿಣ ಸ್ವಿಡಿಯಾ ಪ್ರಾಂತದಲ್ಲಿ ವಿಮಾನ ನಿಲ್ದಾಣ, ಹಮಾ ಪ್ರಾಂತದಲ್ಲಿ ರಕ್ಷಣೆ ಮತ್ತು ಸಂಶೋಧನಾ ಪ್ರಯೋಗಾಲಯವನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News