ಉಕ್ರೇನ್ ಡ್ರೋನ್ ದಾಳಿ | ರಶ್ಯದ ಕೆಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಮಾಸ್ಕೋ: ರಶ್ಯದ ವೊರೊನೆಝ್ ಪ್ರಾಂತದಲ್ಲಿ ಉಕ್ರೇನ್‍ನ ಡ್ರೋನ್ ದಾಳಿಯಲ್ಲಿ ಉಗ್ರಾಣವೊಂದಕ್ಕೆ ಬೆಂಕಿ ಹತ್ತಿಕೊಂಡ ಬಳಿಕ ಉಕ್ರೇನ್ ಗಡಿಭಾಗದಲ್ಲಿರುವ ಕೆಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ಸ್ಥಳೀಯ ಗವರ್ನರ್ ಅಲೆಕ್ಸಾಂಡರ್ ಗುಸೆವ್ ರವಿವಾರ ಹೇಳಿದ್ದಾರೆ.
ಡ್ರೋನ್ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಪೊಡ್ಗೊರೆನ್ಸ್ಕಿ ಜಿಲ್ಲೆಯ ಕೆಲವು ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ರಶ್ಯ ಸ್ವಾಧೀನ ಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತದ ವಿನೊಗ್ರಡ್ನೊಯ್ ಗ್ರಾಮದ ಬಳಿಕ ಗ್ಯಾಸ್ ಪೈಪ್‍ಲೈನ್‍ನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಸಮೀಪದ ಅರಣ್ಯಕ್ಕೆ ಹರಡುವುದನ್ನು ತಡೆಯಲು ಕೆಲವು ಗ್ರಾಮಗಳಿಗೆ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಬೆಂಕಿಯಿಂದಾಗಿ ಸುಮಾರು 1,500 ಚದರ ಮೀಟರ್ ಗಳಷ್ಟು ಪ್ರದೇಶ ಸುಟ್ಟುಹೋಗಿದೆ. ಪೈಪ್‍ಲೈನ್‍ನಲ್ಲಿರುವ ಗ್ಯಾಸ್ ಸಂಪೂರ್ಣ ಸುಟ್ಟುಹೋದ ಬಳಿಕ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಸ್ಥಳೀಯ ಅಧಿಕಾರಿಗಳಯ ಹೇಳಿದ್ದಾರೆ.