ರಶ್ಯದ ಯುರಾಲ್ಸ್‍ನಲ್ಲಿ ಭಾರೀ ಪ್ರವಾಹ | ಸಾವಿರಾರು ಜನರ ಸ್ಥಳಾಂತರ
ಮಾಸ್ಕೋ: ರಶ್ಯದ ಪಶ್ಚಿಮ ಸೈಬೀರಿಯಾ ಮತ್ತು ಯುರಾಲ್ಸ್ ಪ್ರಾಂತಗಳಲ್ಲಿ ಭಾರೀ ಮಳೆಯಿಂದಾಗಿ ನದಿನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕಝಕ್‍ಸ್ತಾನ ಗಡಿಭಾಗದ ಬಳಿಯ ಒರೆನ್‍ಬರ್ಗ್ ನಗರದಲ್ಲಿ ದಶಕದಲ್ಲೇ ದಾಖಲೆ ಪ್ರಮಾಣದ ಪ್ರವಾಹ ಉಂಟಾಗಿದೆ ಎಂದು ವರದಿಯಾಗಿದೆ.
ಯುರಾಲ್ ನದಿಯ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಓಸ್ರ್ಕ್ ನಗರ ಜಲಾವೃತಗೊಂಡಿದೆ. ಒರೆನ್‍ಬರ್ಗ್ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿರುವುದರಿಂದ ಸಾವಿರಾರು ಮಂದಿ ಮನೆಯಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಶ್ಚಿಮ ಸೈಬೀರಿಯಾದ ಕುರ್ಗಾನ್ ಮತ್ತು ಟಿಯುಮೆನ್ ಪ್ರಾಂತದಲ್ಲಿ ಪ್ರವಾಹದ ಸಮಸ್ಯೆ ಎದುರಾಗಿದೆ. ಯುರಾಲ್ಸ್, ವೋಲ್ಗ ಮತ್ತು ಪಶ್ಚಿಮ ಸೈಬೀರಿಯಾ ಪ್ರದೇಶದಲ್ಲಿ 10,000ಕ್ಕೂ ಅಧಿಕ ಕಟ್ಟಡಗಳು ನೆರೆನೀರಿನಲ್ಲಿ ಮುಳುಗಿವೆ. ಓಸ್ರ್ಕ್ ನಗರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದಲ್ಲಿ ಕಟ್ಟಲಾಗಿದ್ದ ಅಣೆಕಟ್ಟೆಯೊಂದು ಒಡೆದಿದೆ. ಒರೆನ್‍ಬರ್ಗ್‍ನಲ್ಲಿ ನೀರಿನ ಮಟ್ಟ ಭಾರೀ ಹೆಚ್ಚಳವಾಗಿದ್ದು 1942ರ ಬಳಿಕದ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ. ಈ ಪ್ರದೇಶದಿಂದ 6000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮೇಯರ್ ಸೆರ್ಗೆಯ್ ಸಾಲ್ಮಿನ್ ಹೇಳಿದ್ದಾರೆ.
ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲು ಸರಕಾರಿ ಆಯೋಗವನ್ನು ರಚಿಸುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಆದೇಶಿಸಿದ್ದಾರೆ. ಸೈಬೀರಿಯಾದ ಕುರ್ಗಾನ್ ನಗರದ ಮೂಲಕ ಹರಿಯುವ ಟೊಬೊಲ್ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 571 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ತುರ್ತು ಕಾರ್ಯಪಡೆ ಮತ್ತು ರಕ್ಷಣಾ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.