ಪರಮಾಣು ನೀತಿ ಪರಿಷ್ಕರಣೆ ಆರಂಭಿಸಿದ ರಶ್ಯ : ವರದಿ
ಮಾಸ್ಕೋ: ವಿಶ್ವದ ಅತೀ ದೊಡ್ಡ ಪರಮಾಣು ಶಕ್ತ ದೇಶ ರಶ್ಯಾವು ತನ್ನ ಪರಮಾಣು ನೀತಿಯ ಪರಿಷ್ಕರಣೆಗೆ ಚಾಲನೆ ನೀಡಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಹೇಳಿದ್ದಾರೆ.
`ಈಗಿನ ವಾಸ್ತವಿಕತೆಗೆ ಸರಿಹೊಂದುವ ರೀತಿಯಲ್ಲಿ ಪರಮಾಣು ಸಿದ್ಧಾಂತವನ್ನು ಪರಿಷ್ಕರಿಸುವ ಕಾರ್ಯ ನಡೆಸುವಂತೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೂಚಿಸಿದ್ದಾರೆ ಎಂದವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬೆದರಿಕೆ ಹೆಚ್ಚುತ್ತಿದೆ ಎಂದು ರಶ್ಯ ಭಾವಿಸುತ್ತಿದ್ದರೆ ಪರಮಾಣು ಶಸ್ತ್ರ ಬಳಕೆಗೆ ಸಂಬಂಧಿಸಿದ ನೀತಿಯನ್ನು ಪರಿಷ್ಕರಿಸುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಶ್ಯದ ಹಿರಿಯ ಸಂಸದರೊಬ್ಬರು ರವಿವಾರ ಆಗ್ರಹಿಸಿದ್ದರು.
ಭದ್ರತೆಗೆ ಬೆದರಿಕೆ ಎದುರಾದರೆ ರಶ್ಯ ತನ್ನ ಪರಮಾಣು ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಯಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ವಾರ ಎಚ್ಚರಿಕೆ ನೀಡಿದ್ದರು. ಉಕ್ರೇನ್‍ನಲ್ಲಿನ ಯುದ್ಧವು 1962ರ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ನಂತರ ರಶ್ಯ ಮತ್ತು ಪಶ್ಚಿಮದ ನಡುವೆ ಅತೀ ದೊಡ್ಡ ಮುಖಾಮುಖಿಯ ಅಪಾಯವನ್ನು ಪ್ರಚೋದಿಸಿದೆ.