ರಶ್ಯ- ಉತ್ತರ ಕೊರಿಯಾ ಪ್ರಯಾಣಿಕರ ರೈಲು ಜುಲೈಯಲ್ಲಿ ಪುನರಾರಂಭ : ವರದಿ
ಮಾಸ್ಕೋ : ಉತ್ತರ ಕೊರಿಯಾಕ್ಕೆ ನೇರ ಪ್ರಯಾಣಿಕರ ರೈಲು ಸೇವೆಯನ್ನು ಜುಲೈಯಿಂದ ಪುನರಾರಂಭಿಸುವುದಾಗಿ ರಶ್ಯ ಬುಧವಾರ ಘೋಷಿಸಿದೆ.
2000ನೇ ಇಸವಿಯ ಬಳಿಕ ಮೊದಲ ಬಾರಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ವಾರ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಉತ್ತೇಜನ ನೀಡುವ ಕೆಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಇದೀಗ ಕೋವಿಡ್ ಸೋಂಕಿನ ಕಾರಣದಿಂದ 4 ವರ್ಷದಿಂದ ಸ್ಥಗಿತಗೊಂಡಿದ್ದ ಉತ್ತರ ಕೊರಿಯಾಕ್ಕೆ ನೇರ ಪ್ರಯಾಣಿಕರ ರೈಲು ಸೇವೆಯನ್ನು ಜುಲೈಯಿಂದ ಪುನರಾರಂಭಿಸುವುದಾಗಿ ರಶ್ಯ ಸರಕಾರ ಘೋಷಿಸಿದೆ ಎಂದು ಇಂಟರ್‍ಫ್ಯಾಕ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಉತ್ತರ ಕೊರಿಯಾ ಗಡಿಯ ಸನಿಹದಲ್ಲಿರುವ ಪ್ರಿಮೊಸ್ರ್ಕಿ ಪ್ರಾಂತದ ವ್ಲಾದಿವೊಸ್ಟೋಕ್ ನಗರದಿಂದ ಉತ್ತರ ಕೊರಿಯಾದ ಬಂದರು ನಗರ ರೇಸನ್ ಅನ್ನು ಸಂಪರ್ಕಿಸುವ ಪ್ರಯಾಣಿಕರ ರೈಲುಸೇವೆ ಜುಲೈ 1ರಿಂದ ಮತ್ತೆ ಆರಂಭಗೊಳ್ಳಲಿದೆ ಎಂದು ಪ್ರಿಮೊಸ್ರ್ಕಿಯ ಗವರ್ನರ್ ಒಲೆಗ್ ಕೊಝೆಮಿಕಾವೊ ಹೇಳಿರುವುದಾಗಿ ವರದಿಯಾಗಿದೆ.