ಮುಸ್ಲಿಮೇತರ ರಾಜತಾಂತ್ರಿಕರಿಗಾಗಿ ಮೊದಲ ಮದ್ಯದಂಗಡಿ ತೆರೆಯಲು ಸಜ್ಜಾದ ಸೌದಿ ಅರೇಬಿಯಾ: ವರದಿ

Update: 2024-01-24 18:29 GMT

Photo : Khaleejtimes.com

ರಿಯಾದ್ : ಮುಸ್ಲಿಮೇತರ ರಾಜತಾಂತ್ರಿಕರಿಗಾಗಿ ಸೌದಿ ಅರೇಬಿಯಾ ರಿಯಾದ್ ನಲ್ಲಿ ಮೊದಲ ಮದ್ಯದಂಗಡಿ ತೆರೆಯಲು ಸಜ್ಜಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮದ್ಯದಂಗಡಿಯು ಆಲ್ಕೋಹಾಲ್ ಯುಕ್ತ ಮದ್ಯವನ್ನು ಸರಬರಾಜು ಮಾಡಲಿದೆ ಎಂದು ತಿಳಿದು ಬಂದಿದೆ. ಮುಸ್ಲಿಮೇತರ ರಾಜತಾಂತ್ರಿಕರಿಗಾಗಿ ಮಾತ್ರ ಈ ಮದ್ಯದಂಗಡಿ ಸೇವೆ ನೀಡಲಿದೆ ಎನ್ನಲಾಗಿದೆ.

ಮದ್ಯದಂಗಡಿಯ ಸೇವೆ ಪಡೆಯಲು ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬೇಕು. ವಿದೇಶಾಂಗ ಸಚಿವಾಲಯದಿಂದ ಕ್ಲಿಯರೆನ್ಸ್ ಕೋಡ್ ಪಡೆಯಬೇಕು. ಮಾಸಿಕ ಕೋಟಾಗಳನ್ನು ಗಮನದಲ್ಲಿಟ್ಟು ಖರೀದಿ ಮಾಡಬೇಕೆಂಬ ಷರತ್ತು ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇಸ್ಲಾಮಿನಲ್ಲಿ ಮದ್ಯಪಾನ ನಿಷೇಧಿಸಿದ್ದರೂ, ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ರಾಜಾಡಳಿತ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ತೈಲದ ಹೊರತಾದ ಆರ್ಥಿಕತೆಯನ್ನು ನಿರ್ಮಿಸಲು ಈಗಾಗಲೇ ಸೌದಿ ಅರೇಬಿಯಾ ಆರಂಭಿಸಿರುವ ʼವಿಷನ್ 2030ʼ ರ ಭಾಗವಾಗಿ ಈ ನಿರ್ಧಾರ ಬಂದಿರಬಹುದು ಎನ್ನಲಾಗಿದೆ.

ಉದ್ದೇಶಿತ ಮದ್ಯದಂಗಡಿಯು ರಾಯಭಾರಿಗಳು ಮತ್ತು ರಾಜತಾಂತ್ರಿಕರು ವಾಸಿಸುವ ರಿಯಾದ್ ನ ರಾಜತಾಂತ್ರಿಕ ಕ್ವಾರ್ಟರ್ನಲ್ಲಿದೆ. ರಾಜತಾಂತ್ರಿಕರದಲ್ಲದ ಮುಸ್ಲಿಮೇತರರಿಗೆ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಂಬರುವ ದಿನಗಳಲ್ಲಿ ಮದ್ಯದಂಗಡಿ ತೆರೆಯುವ ನಿರೀಕ್ಷೆಯಿದೆ ಎಂದು ಯೋಜನೆಗಳ ಬಗ್ಗೆ ತಿಳಿದಿರುವ ಮೂಲವೊಂದು ತಿಳಿಸಿದೆ. ಸೌದಿ ಅರೇಬಿಯಾದಲ್ಲಿ ಮದ್ಯಪಾನದ ವಿರುದ್ಧ ಕಟ್ಟುನಿಟ್ಟಾದ ಕಾನೂನುಗಳಿದೆ. ಕಾನೂನು ಉಲ್ಲಂಘನೆಗೆ ಗಡಿಪಾರು, ದಂಡ ಅಥವಾ ಸೆರೆವಾಸ ದಂತಹಾ ಶಿಕ್ಷೆ ನೀಡಲಾಗುತ್ತಿದೆ

ಈಗ ರಾಜತಾಂತ್ರಿಕರಿಗೆ ಮದ್ಯವು ರಾಜತಾಂತ್ರಿಕರಿಗಾಗಿಯೇ ಬರುವ ವಿಶೇಷ ಸರಕುಗಳ ಮೂಲಕ ಅಥವಾ ಕಪ್ಪು ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ದಶಕಗಳಿಂದ ಕಟ್ಟುನಿಟ್ಟಿನ ಕಾನೂನುಗಳಿಗೆ ಹೆಸರಾಗಿದ್ದ ಸೌದಿ ಅರೇಬಿಯಾವು ಇತ್ತೀಚಿನ ವರ್ಷಗಳಲ್ಲಿ ಕಟ್ಟುನಿಟ್ಟಾದ ಸಾಮಾಜಿಕ ಸಂಹಿತೆಗಳನ್ನು ಸಡಿಲಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ಕ್ರಮಗಳಿಗೆ ಅಂತ್ಯ ಹಾಡಿದೆ. ಮಹಿಳೆಯರಿಗೆ ಬುರ್ಖಾ ಕಡ್ಡಾಯ ಕ್ರಮಗಳನ್ನು ಹಿಂಪಡೆದಿದೆ.

ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅಧಿಕಾರದ ಮೇಲೆ ಬಿಗಿಯಾದ ಹಿಡಿತವು ನೂತನ ಬದಲಾವಣೆಗಳೊಂದಿಗೆ ದೇಶವನ್ನು ಧಾರ್ಮಿಕವಲ್ಲದ ಪ್ರವಾಸೋದ್ಯಮಕ್ಕೆ ತೆರೆಯುವ ಯೋಜನೆಯನ್ನು ಒಳಗೊಂಡಿದೆ. ವಿಷನ್ 2030 ಯೋಜನೆಯು ಸ್ಥಳೀಯ ಕೈಗಾರಿಕೆಗಳು ಮತ್ತು ಲಾಜಿಸ್ಟಿಕ್ಸ್ ಹಬ್ ಗಳನ್ನು ಅಭಿವೃದ್ಧಿಪಡಿಸಲಿದೆ. ಸೌದಿ ಪ್ರಜೆಗಳಿಗೆ ಉದ್ಯೋಗ ನೀಡುವ ಮಹಾತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News