ಎಸ್ಎಫ್ ಜೆ ಬೆದರಿಕೆ ಹಿನ್ನೆಲೆ ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ: ಕೆನಡಾ
ಒಟ್ಟಾವ : ಏರ್ ಇಂಡಿಯಾ ವಿಮಾನಗಳಿಗೆ ಬೆದರಿಕೆ ಒಡ್ಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ದೇಶದ ವಿಮಾನ ನಿಲ್ದಾಣಗಳಿಗೆ ಬಂದುಹೋಗುವ ವಿಮಾನಗಳಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಕೆನಡಾ ಭಾರತಕ್ಕೆ ತಿಳಿಸಿದೆ.
ಕೆನಡಾದಲ್ಲಿ ಕಾರ್ಯಾಚರಿಸುತ್ತಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುಂಪು ‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್ಎಫ್ ಜೆ) ಶನಿವಾರ ಪೋಸ್ಟ್ ಮಾಡಿರುವ ವೀಡಿಯೊಗೆ ಸಂಬಂಧಿಸಿ ಈ ಬೆಳವಣಿಗೆ ನಡೆದಿದೆ. ಎಸ್ಎಫ್ ಜೆ ಪ್ರಧಾನ ಕಾರ್ಯದರ್ಶಿ ಗುರು ಪತ್ವಂತ್ ಪನ್ನೂನ್ ‘ಏರ್ ಇಂಡಿಯಾ ವಿಮಾನಗಳಲ್ಲಿ ನವೆಂಬರ್ 19ರ ಬಳಿಕ ಪ್ರಯಾಣಿಸಿದರೆ ನಿಮ್ಮ ಜೀವಕ್ಕೆ ಅಪಾಯ ಎದುರಾಗಲಿದೆ’ ಎಂದು ಬೆದರಿಕೆ ಒಡ್ಡಿರುವ ಹಾಗೂ ಮತ್ತೊಂದು ವೀಡಿಯೊದಲ್ಲಿ ‘ ಏರ್ ಇಂಡಿಯಾ ವಿಮಾನಕ್ಕೆ ಜಾಗತಿಕವಾಗಿ ತಡೆಯೊಡ್ಡುವಂತೆ’ ಕರೆ ನೀಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವಂತೆಯೇ ಗುರುವಾರ ಮತ್ತೊಂದು ಹೇಳಿಕೆ ನೀಡಿದ್ದ ಗುರು ಪತ್ವಂತ್ ‘ಏರ್ ಇಂಡಿಯಾಕ್ಕೆ ನಿರ್ಬಂಧ ವಿಧಿಸಬೇಕೆಂದು ಹೇಳಿದ್ದೆ, ಇದು ಬೆದರಿಕೆಯಲ್ಲ’ ಎಂದಿರುವುದಾಗಿ ವರದಿಯಾಗಿದೆ. ಇದೀಗ ಏರ್ ಇಂಡಿಯಾ ವಿಮಾನಗಳಿಗೆ ಭದ್ರತೆ ಹೆಚ್ಚಿಸುವ ಕೋರಿಕೆಗೆ ಕೆನಡಾ ಸರಕಾರ ಸ್ಪಂದಿಸಿದೆ ಎಂದು ಹಿರಿಯ ಭಾರತೀಯ ಅಧಿಕಾರಿ ದೃಢಪಡಿಸಿದ್ದಾರೆ. ‘ವಿಮಾನಯಾನ ಸಂಸ್ಥೆಗಳಿಗೆ ಎದುರಾಗುವ ಬೆದರಿಕೆಯನ್ನು ನಮ್ಮ ಸರಕಾರ ತುಂಬಾ ಗಂಭೀರವಾಗಿ ಪರಿಗಣಿಸಲಿದೆ. ಇದೀಗ ಏರ್ ಇಂಡಿಯಾಕ್ಕೆ ಸಂಬಂಧಿಸಿ ಆನ್ ಲೈನ್ ನಲ್ಲಿ ಹರಿದಾಡುತ್ತಿರುವ ಇತ್ತೀಚಿನ ಬೆದರಿಕೆಯನ್ನು ತನಿಖೆ ನಡೆಸಲಾಗುತ್ತಿದೆ. ಕೆನಡಾ ಪೊಲೀಸರು ಬೆದರಿಕೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಕೆನಡಾದ ಸಾರಿಗೆ ಸಚಿವ ಪಾಬ್ಲೊ ರಾಡ್ರಿಗಸ್ ಹೇಳಿದ್ದಾರೆ.