ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ ವಿರುದ್ಧ ಮತ್ತೆ ಮೂರು ಪ್ರಕರಣ ದಾಖಲು

Update: 2024-08-18 17:54 GMT

ಶೇಕ್‌ ಹಸೀನಾ (Photo: PTI) 

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ ವಿರುದ್ಧ ರವಿವಾರ ಮತ್ತೆ ಮೂರು ಪ್ರಕರಣ ದಾಖಲಾಗಿದ್ದು ಇದರೊಂದಿಗೆ ಆಗಸ್ಟ್ 5ರ ಬಳಿಕ ಹಸೀನಾ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 10ಕ್ಕೇರಿದೆ.

2015ರಲ್ಲಿ ತನ್ನ ಬದ್ಧ ಪ್ರತಿಸ್ಪರ್ಧಿ, ಬಿಎನ್‍ಪಿ ಮುಖ್ಯಸ್ಥೆ ಖಾಲಿದಾ ಝಿಯಾ ಮೇಲೆ ದಾಳಿ ನಡೆಸಲು ಆದೇಶಿಸಿರುವುದು, 2013ರಲ್ಲಿ ಢಾಕಾದಲ್ಲಿ ನಡೆದ ರ್ಯಾಲಿಯಲ್ಲಿ ಗುಂಡು ಹಾರಾಟ ಮತ್ತು ಆಗಸ್ಟ್ 4ರಂದು ಜೋಯ್ಪುರ್ಹಾತ್ ಜಿಲ್ಲೆಯಲ್ಲಿ ವಿದ್ಯಾರ್ಥಿಯ ಹತ್ಯೆಯ ಪ್ರಕರಣದಲ್ಲಿ ಹಸೀನಾರನ್ನು ಆರೋಪಿಯೆಂದು ಹೆಸರಿಸಲಾಗಿದೆ.

ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ವಿರೋಧಿಸಿ ಜುಲೈ 1ರಂದು ಆರಂಭಗೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಲ್ಲಿ ವಿದ್ಯಾರ್ಥಿಗಳ ಸಹಿತ 600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಹಿಂಸಾಚಾರದಲ್ಲಿ 44 ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಶಾಲೆ, ಕಾಲೇಜು ಪುನರಾರಂಭ:

ಪ್ರಧಾನಿ ಶೇಕ್‌ ಹಸೀನಾ ಅವರನ್ನು ಪದಚ್ಯುತಗೊಳಿಸಲು ಕಾರಣವಾದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಿಂದಾಗಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಮುಚ್ಚಲಾಗಿದ್ದ ವಿಶ್ವವಿದ್ಯಾಲಯಗಳು, ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ರವಿವಾರ ಪುನರಾರಂಭಿಸಲಾಗಿದೆ.

ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜುಲೈ 17ರಂದು ಬಾಂಗ್ಲಾದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನೂ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿತ್ತು. ಹೊಸ ಪೆನ್ಷನ್ ಯೋಜನೆಯನ್ನು ವಿರೋಧಿಸಿ ಶಿಕ್ಷಕರು ಮುಷ್ಕರ ಆರಂಭಿಸಿದ್ದರಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜುಲೈ 1ರಿಂದಲೇ ತರಗತಿಗಳನ್ನು ಅಮಾನತುಗೊಳಿಸಲಾಗಿತ್ತು. ಆಗಸ್ಟ್ 5ರಂದು ಶೇಕ್‌ ಹಸೀನಾ ಸರಕಾರ ಪತನಗೊಂಡ ಬಳಿಕ ಆಗಸ್ಟ್ 7ರಂದು ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ ಘೋಷಿಸಲಾಗಿತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇದೀಗ ಶೈಕ್ಷಣಿಕ ವರ್ಷವನ್ನು ಮರು ರೂಪಿಸಲಾಗಿದ್ದು ಅಕ್ಟೋಬರ್ 23ರಂದು ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಸೂಚನೆ ತಿಳಿಸಿದೆ.

ಗೃಹ ಇಲಾಖೆ ಸಲಹೆಗಾರರ ಬದಲಾವಣೆ

ಕೇವಲ ಮೂರು ದಿನಗಳ ಹಿಂದೆ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಗೃಹ ಇಲಾಖೆ ಸಲಹೆಗಾರರಾಗಿ ನೇಮಕಗೊಂಡಿದ್ದ ಬ್ರಿಗೇಡಿಯರ್ ಜನರಲ್ ಎಂ. ಸಖಾವತ್ ಹುಸೇನ್‍ರನ್ನು ಬದಲಾಯಿಸಲಾಗಿದೆ.

ಹುಸೇನ್ ಅವರ ವರ್ತನೆಯ ಬಗ್ಗೆ ವಿದ್ಯಾರ್ಥಿ ಮುಖಂಡರು ಟೀಕಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಜವಳಿ ಮತ್ತು ಸೆಣಬು ಸಚಿವಾಲಯದ ಸಲಹೆಗಾರ ಸ್ಥಾನಕ್ಕೆ ವರ್ಗಾಯಿಸಿ ಅವರ ಸ್ಥಾನದಲ್ಲಿ ಲೆ| ಜ| ಜಹಾಂಗೀರ್ ಆಲಮ್ ಚೌಧರಿಯನ್ನು ನೇಮಕಗೊಳಿಸಲಾಗಿದೆ. ಅಲ್ಲದೆ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರಕಾರವು ನಾಲ್ಕು ಸಚಿವಾಲಯ ಹಾಗೂ ಅಧ್ಯಕ್ಷರ ಕಚೇರಿಯಲ್ಲಿ ಐದು ಕಾರ್ಯದರ್ಶಿಗಳಿಗೆ ಗುತ್ತಿಗೆ ನೇಮಕಾತಿಯನ್ನು ನೀಡಿದೆ. ಜಹಾಂಗೀರ್ ಆಲಮ್‍ಗೆ ಕೃಷಿ ಸಚಿವಾಲಯದ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು `ದಿ ಡೈಲಿ ಸ್ಟಾರ್' ದಿನಪತ್ರಿಕೆ ವರದಿ ಮಾಡಿದೆ. ಸಲಹೆಗಾರರಿಗೆ ಸಚಿವ ಹುದ್ದೆಯ ಸ್ಥಾನಮಾನವಿದೆ.

ಗೃಹ ಇಲಾಖೆಯ ಸಲಹೆಗಾರರಾಗಿ ನೇಮಕಗೊಂಡ ಬಳಿಕ ಬ್ರಿ|ಜ| ಎಂ. ಸಖಾವತ್ ಹುಸೇನ್ ನೀಡಿದ್ದ ಹಲವು ಹೇಳಿಕೆಗಳಿಗೆ ವ್ಯಾಪಕ ವಿರೋಧ ಮತ್ತು ಟೀಕೆ ವ್ಯಕ್ತವಾಗಿತ್ತು. ಮಾಜಿ ಚುನಾವಣಾ ಆಯುಕ್ತರಾಗಿರುವ ಹುಸೇನ್ ಜೂನ್ 11ರಂದು ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ರಾಜಕೀಯ ಪಕ್ಷಗಳನ್ನುದ್ದೇಶಿಸಿ `ಈಗ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿ ಸುಲಿಗೆ ನಡೆಸಬಹುದು ಎಂದು ನೀವು ಭಾವಿಸಿದರೆ ಸ್ವಲ್ಪ ಸಮಯದವರೆಗೆ ಮುಂದುವರಿಯಬಹುದು. ಆದರೆ ನಿಮ್ಮ ಕಾಲುಗಳನ್ನು ಮುರಿಯುವಂತೆ ಸೇನಾ ಮುಖ್ಯಸ್ಥರಿಗೆ ಮನವಿ ಮಾಡಿದ್ದೇನೆ. ನಾನು ಯಾವುದಕ್ಕೂ ಹೆದರುವವನಲ್ಲ' ಎಂದು ಎಚ್ಚರಿಕೆ ನೀಡಿದ್ದರು. ಪ್ರತ್ಯೇಕ ಸುದ್ದಿಗೋಷ್ಟಿಯಲ್ಲಿ ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ ಅವರ ಪಕ್ಷದ ಮುಖಂಡರಿಗೆ `ನಿಮ್ಮ ಜೀವಕ್ಕೆ ಅಪಾಯವಾಗುವಂತಹ ಯಾವುದೇ ಕೆಲಸ ಮಾಡಬೇಡಿ' ಎಂದು ಎಚ್ಚರಿಕೆ ನೀಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News