ಸಿಂಗಾಪುರದಲ್ಲಿ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ: ಪ್ರಧಾನಿ ಮೋದಿ ಘೋಷಣೆ
ಸಿಂಗಾಪುರ: ತಮಿಳು ಭಾಷೆ, ನಾಗರಿಕತೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ನಿರ್ವಹಿಸುವ ಉದ್ದೇಶದಿಂದ ಸಿಂಗಾಪುರದಲ್ಲಿ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಭಾರತದ ಪ್ರಥಮ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ ಸಿಂಗಾಪುರದಲ್ಲಿ ಆರಂಭಗೊಳ್ಳಲಿದೆ. ಮಹಾನ್ ಸಂತ ತಿರುವಳ್ಳುವರ್ ಅತೀ ಪುರಾತನ ಭಾಷೆಯಲ್ಲಿ ಪ್ರಪಂಚಕ್ಕೆ ಮಾರ್ಗದರ್ಶಿ ಚಿಂತನೆಗಳನ್ನು ನೀಡಿದ್ದಾರೆ. ಅವರು ಸುಮಾರು 2 ಸಾವಿರ ವರ್ಷಗಳ ಹಿಂದೆ ಬರೆದ `ತಿರುಕ್ಕುರಲ್'ನಲ್ಲಿ ಉಲ್ಲೇಖಿಸಿರುವ ಚಿಂತನೆಗಳು ಈಗಿನ ಕಾಲಕ್ಕೂ ಪ್ರಸ್ತುತವೆನಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಸಿಂಗಾಪುರದ ಪ್ರಧಾನಿ ಲಾರೆನ್ಸ್ ವೋಂಗ್ ಜತೆಗಿನ ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಾಯಿತು. ಡಿಜಿಟಲ್ ತಂತ್ರಜ್ಞಾನ, ಸೆಮಿಕಂಡಕ್ಟರ್ ಗಳು, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಉಭಯ ಮುಖಂಡರು ಸಮ್ಮತಿಸಿದರು ಮತ್ತು ಈ ಕ್ಷೇತ್ರಗಳಲ್ಲಿ 4 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸುಧಾರಿತ ಉತ್ಪಾದನೆ, ಸಂಪರ್ಕ, ಡಿಜಿಟಲೀಕರಣ, ಆರೋಗ್ಯ, ರಕ್ಷಣೆಯ ಕ್ಷೇತ್ರಗಳನ್ನು ಒಳಗೊಂಡ ದ್ವಿಪಕ್ಷೀಯ ಸಂಬಂಧದ ವಿವಿಧ ಅಂಶಗಳನ್ನು ಅವರು ವ್ಯಾಪಕವಾಗಿ ಪರಿಶೀಲಿಸಿದರು. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಗಳ ಹರಿವನ್ನು ಮತ್ತಷ್ಟು ವಿಸ್ತರಿಸಲು ಉಭಯ ಮುಖಂಡರು ನಿರ್ಧರಿಸಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ.
ಭಾರತ ಮತ್ತು ಸಿಂಗಾಪುರಗಳು ತಮ್ಮ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಎತ್ತರಿಸಿವೆ. ಇದು ಭಾರತದ `ಆ್ಯಕ್ಟ್ ಈಸ್ಟ್' ನೀತಿಗೆ ಉತ್ತೇಜನ ನೀಡಲಿದೆ. ಸಿಂಗಾಪುರವು ಕೇವಲ ಪಾಲುದಾರ ರಾಷ್ಟ್ರವಲ್ಲ, ಎಲ್ಲಾ ಅಭಿವೃದ್ಧಿಶೀಲ ದೇಶಗಳಿಗೆ ಸ್ಫೂರ್ತಿಯಾಗಿದೆ. ಭಾರತದಲ್ಲಿನ ತ್ವರಿತ ಮತ್ತು ಸುಸ್ಥಿರ ಬೆಳವಣಿಗೆಯು ಸಿಂಗಾಪುರದ ಸಂಸ್ಥೆಗಳಿಗೆ ಅಪಾರ ಹೂಡಿಕೆಯ ಅವಕಾಶಗಳನ್ನು ತೆರೆದಿದೆ ಎಂದು ಮೋದಿ ಹೇಳಿದರು.
ರಕ್ಷಣೆ ಮತ್ತು ಭದ್ರತೆ, ಶಿಕ್ಷಣ, ಎಐ(ಕೃತಕ ಬುದ್ಧಿಮತ್ತೆ), ಆರ್ಥಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಜ್ಞಾನ ಪಾಲುದಾರಿಕೆ, ಕಡಲ ಅಧಿಪತ್ಯ (ವ್ಯಾಪ್ತಿ) ಜಾಗೃತಿ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಸಹಕಾರ ಸಂಬಂಧವನ್ನು ಪರಿಶೀಲಿಸಿದರು ಹಾಗೂ ಹಸಿರು ಕಾರಿಡಾರ್ ಯೋಜನೆಗಳ ವೇಗವರ್ಧನೆಗೆ ಕರೆ ನೀಡಿದರು. 2024ರ ಆಗಸ್ಟ್ ನಲ್ಲಿ ಸಿಂಗಾಪುರದಲ್ಲಿ ನಡೆದಿದ್ದ ಎರಡನೇ ಭಾರತ-ಸಿಂಗಾಪುರ ಸಚಿವ ಮಟ್ಟದ ದುಂಡುಮೇಜಿನ ಸಭೆಯ ಫಲಿತಾಂಶಗಳ ಬಗ್ಗೆ ಉಭಯ ಮುಖಂಡರು ಚರ್ಚೆ ನಡೆಸಿದರು. 2025ರಲ್ಲಿ ದ್ವಿಪಕ್ಷೀಯ ಸಂಬಂಧಗಳ 60ನೇ ವರ್ಷಾಚರಣೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ.ಭಾರತ- ಆಸಿಯಾನ್ ಸಂಬಂಧಗಳು ಹಾಗೂ ಇಂಡೊ-ಪೆಸಿಫಿಕ್ ಕುರಿತಂತೆ ಭಾರತದ ದೃಷಿಕೋನ ಸೇರಿದಂತೆ ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಉಭಯ ಮುಖಂಡರು ಅಭಿಪ್ರಾಯ ವಿನಿಮಯ ನಡೆಸಿದರು. ಈ ಸಂದರ್ಭ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ನೀಡಿದ ಆಮಂತ್ರಣವನ್ನು ವೋಂಗ್ ಸ್ವೀಕರಿಸಿದರು.
ಸಿಂಗಾಪುರಕ್ಕೆ ಬುಧವಾರ ಆಗಮಿಸಿದ ಮೋದಿಗೆ ಸಿಂಗಾಪುರದ ಸಂಸತ್‍ನಲ್ಲಿ ಪ್ರಧಾನಿ ವೋಂಗ್‍ರಿಂದ ಹಾರ್ದಿಕ ಸ್ವಾಗತ ದೊರೆಯಿತು. ಸಂಸತ್‍ನಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದ ಮೋದಿ ಸಚಿವರು ಮತ್ತು ಸಿಂಗಾಪುರದ ನಿಯೋಗವನ್ನು ಭೇಟಿ ಮಾಡಿದರು. ಬಳಿಕ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಿದರು.