ಗಾಝಾ: ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಮೊಮ್ಮಗಳನ್ನು ಅಪ್ಪಿಕೊಂಡು ವಿದಾಯ ಹೇಳಿ ಜಗತ್ತಿನ ಗಮನ ಸೆಳೆದಿದ್ದ ಅಜ್ಜ ಕೂಡಾ ಬಾಂಬ್ ದಾಳಿಗೆ ಬಲಿ
ಗಾಝಾ: ಇಸ್ರೇಲ್ ದಾಳಿಗೆ ಬಲಿಯಾಗಿದ್ದ ತನ್ನ ಮೂರು ವರ್ಷದ ಮೊಮ್ಮಗಳನ್ನು ಹಿಡಿದುಕೊಂಡು ದುಃಖಿಸಿ ಇಡೀ ಜಗತ್ತಿನ ಮುಂದೆ ಸುದ್ದಿಯಾಗಿದ್ದ ಫೆಲೆಸ್ತೀನ್ ನ ಅಜ್ಜ ಖಲೀದ್ ನಭನ್, ಸೋಮವಾರ ನುಸಿರತ್ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ನವೆಂಬರ್ ನಲ್ಲಿ ನುಸಿರತ್ ನಿರಾಶ್ರಿತರ ಶಿಬಿರವನ್ನು ಗುರಿಯಾಗಿಸಿ ಇಸ್ರೆಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಖಲೀದ್ ನಭನ್ ಅವರ ಮೂರು ವರ್ಷದ ಮೊಮ್ಮಗಳು ರೀಮ್ ಮತ್ತು ಮೊಮ್ಮಗ ತಾರಿಕ್ ಮೃತಪಟ್ಟಿದ್ದರು. ತನ್ನ ಮೊಮ್ಮಗಳ ನಿಶ್ಚಲ ಶರೀರವನ್ನು ಅಪ್ಪಿಕೊಂಡು ಅವಳ ಕಣ್ಣುಗಳಿಗೆ ಮುತ್ತಿಟ್ಟು , ಕೂದಲು ಮತ್ತು ಮುಖವನ್ನು ಸವರುತ್ತಾ "ನನ್ನ ಆತ್ಮದ ಆತ್ಮ" ಎಂದು ಖಲೀದ್ ನಭನ್ ಮೊಮ್ಮಗಳಿಗೆ ಭಾವಪೂರ್ಣ ವಿದಾಯ ಹೇಳಿದ್ದರು. ಈ ಕುರಿತ ವೀಡಿಯೊ ಜಗತ್ತಿನ ಗಮನ ಸೆಳೆದಿತ್ತು. ಖಲೀದ್ ನಭನ್ ಅವರ ವೀಡಿಯೊವನ್ನು ಹಂಚಿಕೊಂಡು ಸಾವಿರಾರು ಮಂದಿ ಇಸ್ರೇಲ್ ನರಮೇಧವನ್ನು ಖಂಡಿಸಿದ್ದರು.
ಸೋಮವಾರ ಗಾಝಾದ ನುಸಿರತ್ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ, ದಾಳಿಯಲ್ಲಿ ಮೃತಪಟ್ಟ ಹಲವರಲ್ಲಿ ಖಲೀದ್ ನಭನ್ ಕೂಡ ಸೇರಿದ್ದಾರೆ. ಇಸ್ರೇಲ್ ಸೈನಿಕರ ಕ್ರೌರ್ಯಕ್ಕೆ ಬಲಿಯಾದ ತನ್ನ ಮೂರು ವರ್ಷದ ಮೊಮ್ಮಗಳನ್ನು ಅಪ್ಪಿಕೊಂಡು ಕಣ್ಣು ಮತ್ತು ಮುಖಕ್ಕೆ ಮುತ್ತಿಟ್ಟು ರೋಧಿಸಿದ ಅಜ್ಜ ಖಲೀದ್ ನಭನ್, ಕೊನೆಗೆ ತಾನೂ ಕೂಡ ಅದೇ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ.